ಮೂಡುಬಿದಿರೆಯ ಪ್ರಮುಖ ರಸ್ತೆಗಳಲ್ಲಿ ಪ್ರವಾಹದ ಪರಿಸ್ಥಿತಿ.? ಏನು ಮಾಡುತ್ತಿದೆ ಬೆದ್ರದ ಪುರಸಭೆ.? ಚರಂಡಿಗಳ ನಿರ್ವಹಣೆ ನಿಜಕ್ಕೂ ಆಗಿದೇಯಾ.?


ಮೂಡುಬಿದಿರೆ: ಕರ್ನಾಟಕದ ಶಿಕ್ಷಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಬೆದ್ರದಲ್ಲಿ ನಾನಾ ಅವಂತಾರಗಳು ನಡೆಯುತ್ತಿದೆ. ಮೂಲ್ಕಿ-ಮೂಡುಬಿದಿರೆಯ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಪರಿಸರದಲ್ಲಿನ ಸಾಲು ಸಾಲು ಅಪಘಾತಗಳಿಂದ ಭಾರೀ ಸುದ್ದಿಯಾಗುತ್ತಿದೆ. ಮೂಡುಬಿದಿರೆಯಲ್ಲಿ ಸುರಿದ ವರ್ಷದ ಮೊದಲ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಕೃತಕ ನೆರೆಯ ಪರಿಸ್ಥಿತಿ ಬಂದಿರುವುದು ಮತ್ತೊಂದು ಶೋಚನಿಯ ಸಂಗತಿ.

ಒಳಚರಂಡಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದ ಪರಿಣಾಮವಾಗಿ ಮೊದಲ ಮಳೆಗೆ ಬೆದ್ರದ ಆಳ್ವಾಸ್ ಅಸ್ಪತ್ರೆ ರಸ್ತೆ, ವಿಜಯ ನಗರ ರಸ್ತೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜ ಕಾಲುವೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಿದ್ದವರು ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನಾವು ಮಾಡಿದ್ದೇ ಕಾನೂನು; ನಮ್ಮದೇ ಆಡಳಿತ ಇಲ್ಲಿ ಕೇಳುವವರು ಯಾರು ಎನ್ನುವ ರೀತಿಯಲ್ಲಿ ನಡೆದುಕೊಂಡ ಪರಿಣಾಮ ಈ ರೀತಿಯ ತೊಂದರೆಯಾಗಿರುವುದು ಮಾತ್ರ ಸುಳ್ಳಲ್ಲ. ಮೊದಲ ಮಳೆಗೆ ಈ ರೀತಿಯ ಆಯೋ-ಮಯ ಪರಿಸ್ಥಿತಿ ಎದುರಾಗಿರುವುದನ್ನು ಕಂಡಿರುವ ಮೂಡಬಿದಿರೆಯ ಜನತೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗಬಹುದೋ ಎಂದು ಭಯಭೀತರಾಗಿದ್ದರೆ.

ಒಳಚರಂಡಿಗಳಲ್ಲಿ ಪ್ಲಾಸ್ಟಿಕ್ ರಾಶಿ; ಜಲಮಾಲಿನ್ಯಕ್ಕೆ ಆಹ್ವಾನ:

ಮೂಡುಬಿದಿರೆ ನಗರದ ಒಳಚರಂಡಿಗಳಲ್ಲಿ ಪ್ಲಾಸ್ಟಿಕ್ ಗಳ ರಾಶಿ ತುಂಬಿಕೊಂಡಿದ್ದು ಇದನ್ನು ಮಳೆಗಾಲದ ಪೂರ್ವದಲ್ಲಿ ಕ್ಲಿನ್ ಮಾಡಬೇಕು, ಇಲ್ಲವಾದಲ್ಲಿ ಇವುಗಳು ಚರಂಡಿ ಬ್ಲಾಕ್ ಆಗಲು ಕಾರಣವಾಗುವುದಲ್ಲದೇ; ಈ ಪ್ಲಾಸ್ಟಿಕ್ ಗಳು ಸಮುದ್ರವನ್ನು ಸೇರಿ ಜಲ ಹಾಗೂ ಮಣ್ಣು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಮಾನ್ಸೂನ್ ಮಳೆ ಆರಂಭವಾಗಲು ಇನ್ನೂ ಒಂದು ವಾರವಿರುವುದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಚರಂಡಿಗಳನ್ನು ಕ್ಲಿನ್ ಮಾಡುವ ಕೆಲಸವನ್ನು ಅದಷ್ಟು ಶೀಘ್ರದಲ್ಲಿ ಮಾಡಬೇಕು. ಈ ಕಾರ್ಯಗಳನ್ನು ಪುರಸಭೆಯವರು ಸರಿಯಾಗಿ ನಿರ್ವಹಿಸದಿದ್ದಲ್ಲಿ ನಗರದಲ್ಲಿ ಕೃತಕ ನೆರೆಯ ಭಾಗ್ಯ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.