ಮಂಗಳೂರು: ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಕಳೆದ ಒಂದು ವಾರದಿಂದ ಕ್ಷೀಪ್ರಗತಿಯ ಬೆಳವಣಿಗೆಗಳು ನಡೆಯುತ್ತಿದೆ. ರಾಜಕೀಯದ ಇತಿಹಾಸದಲ್ಲಿಯೇ ಆಚ್ಚರಿ ಎಂಬಂತೆ ಸಿದ್ದರಾಮಯ್ಯನವರು ಹೈಕಮಾಂಡ್ ಮಾತಿಗೆ ಒಪ್ಪಿ ರಾಜೀನಾಮೆ ನೀಡಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದು ಒಂದು ಕಡೆಯಾದರೆ. ಕನಕಪುರದ ಬಂಡೆ ಎಂದು ಖ್ಯಾತಿ ಪಡೆದಿರುವ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಎಂಬುದು ಮತ್ತೊಂದು ವಿಶೇಷ.
ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬುದು ಘೋಷಣೆಯಾಯ್ತು ಅದರೆ ಮುಂದಿನ ಸಂಪುಟ ಸರ್ಕಸ್ ಯಾವ ರೀತಿ ಇರಲಿದೆ ಎಂಬುದು ಅನೇಕರಲ್ಲಿ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯನವರ ಸಂಪುಟದಲ್ಲಿದ್ದ ಆನೇಕ ಸಚಿವರಿಗೆ ಕೋಕ್ ನೀಡಲಾಗುತ್ತದೆ ಎಂಬ ಸುದ್ದಿಗಳು ಬಲವಾಗಿ ದೆಹಲಿ ಮಟ್ಟದಿಂದ ಕೇಳಿ ಬರಲಾರಂಬಿಸಿದೆ. ಈ ಮಧ್ಯೆ ಕಾಂಗ್ರೆಸ್ ನ ನೂರಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ಬಿಡುಬಿಟ್ಟಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಮಾತ್ರವಲ್ಲದೆ ತಮ್ಮ ನೆಚ್ಚಿನ ಹಿರಿಯ ಶಾಸಕರ ಪರವಾಗಿ ಲಾಬಿ ನಡೆಸಲು ಆನೇಕ ಶಾಸಕರು ದೆಹಲಿ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂಬುದು ಮತ್ತೊಂದು ಕಡೆ ಕೇಳಿ ಬರುತ್ತಿರುವ ಸುದ್ದಿ. ಈ ಎಲ್ಲಾದರ ನಡುವೆ ದಕ್ಷಿಣಕನ್ನಡದ ಮೂವರಿಗೆ ಅದೃಷ್ಟ ಖುಲಾಯಿಸಲಿದೆಯಾ ಎಂಬ ಚರ್ಚೆಗಳು ಕೇಳಿ ಬರಲಾರಂಭಿಸಿದೆ.
ಇಬ್ಬರು ಶಾಸಕರಿಗೂ ಮಂತ್ರಿ ಭಾಗ್ಯ ಸಿಗಲಿದೆಯಾ.?
ದಕ್ಷಿಣಕನ್ನಡಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿರುವುದು ಕೇವಲ ಇಬ್ಬರೂ ಮಾತ್ರ ಅದರಲ್ಲಿ ಒಬ್ಬರು ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದಂತಹ ಉಳ್ಳಾಲದ ಶಾಸಕ ಯು.ಟಿ ಖಾದರ್ ಹಾಗೂ ಇನ್ನೊಬ್ಬರು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಆಶೋಕ್ ಕುಮಾರ್ ರೈ. ಯು.ಟಿ ಖಾದರ್ ಅವರಿಗೆ ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ಪಕ್ಕಾ. ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ 'ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ; ಒಂದು ವೇಳೆ ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ' ಎಂದು ಹೇಳಿ ದೆಹಲಿಯ ಯಾತ್ರೆ ಕೈಗೊಂಡಿರುವುದು ಭಾರೀ ಆಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಇಬ್ಬರೂ ಶಾಸಕರಿಗೂ ಸಚಿವ ಸ್ಥಾನದ ಭಾಗ್ಯ ಸಿಗಲಿದೆಯಾ ಎಂಬುದನ್ನು ಕಾಡು ನೋಡಬೇಕಿದೆ.
ಮಿಥುನ್ ರೈ'ಗೂ ಅದೃಷ್ಟದ ಬಾಗಿಲು ತೆರೆಯುವ ಅವಕಾಶ:
ಡಿ.ಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ನ ಯುವ ನಾಯಕ ಮಿಥುನ್ ರೈ ಅವರಿಗೂ ಈ ಬಾರಿ ಅದೃಷ್ಠದ ಬಾಗಿಲು ತೆರೆಯಲಿದೆ ಎಂಬುದರ ಬಗೆಗೂ ಹಲವಾರು ಚರ್ಚೆಗಳು ಆರಂಭವಾಗಿದೆ. ಕೆಲದಿನಗಳಲ್ಲಿ ಸದನದ ಮೇಲ್ಮನೆಯಾದ ವಿಧಾನಪರಿಷತ್ತು ಚುನಾವಣೆ ನಡೆಯಲಿದ್ದು, ವಿಧಾನಪರಿಷತ್ತಿಗೆ ತಮ್ಮ ಆಪ್ತನನ್ನು ಕಳುಹಿಸುವ ಮೂಲಕ ಯುವಕರಿಂದ ಕೂಡಿದ ಸದನವನ್ನು ನಡೆಸಬೇಕು ಎಂಬ ತಮ್ಮ ಕನಸನ್ನು ಈ ಮೂಲಕ ನೆರವೆರಿಸಿಕೊಂಡರೆ ಆಚ್ಚರಿಯೇನಿಲ್ಲ. ಒಂದು ವೇಳೆ ಮಿಥುನ್ ರೈ ವಿಧಾನಸಪರಿಷತ್ತಿಗೆ ಆಯ್ಕೆಯಾದರೆ ಭವಿಷ್ಯದಲ್ಲಿ ಸಚಿವರಾಗುವ ದಿನವೂ ದೂರವೆನಿಲ್ಲ ಎನ್ನುವುದು ರಾಜಕೀಯ ಪಂಡಿತರ ಮಾತು.
ಒಟ್ಟಾರೆಯಾಗಿ ಡಿ.ಕೆ ಶಿವಕುಮಾರ್ ಅವರ ನೂತನ ಯುವ ಸಚಿವ ಸಂಪುಟದಲ್ಲಿ ಎಷ್ಟು ಜನರಿಗೆ ಅವಕಾಶ ನೀಡಲಿದ್ದಾರೆ ಎಂಬ ಕುತೂಹಲ ಒಂದು ಕಡೆಯಾದರೆ ದಕ್ಷಿಣ ಕನ್ನಡದ ಇಬ್ಬರೂ ಶಾಸಕರಿಗೂ ಮಂತ್ರಿ ಸ್ಥಾನ ಒಲಿಯುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಲಿದೆಯಾ ಎಂಬ ರಾಜಕೀಯ ಲೆಕ್ಕಾಚಾರ ಕಡಲ ತೀರದಲ್ಲಿ ಜೋರಾಗಿದೆ.