SPYSS'ನ ಕರಿಂಕ ಶ್ರೀ ದುರ್ಗಾಪರಮೇಶ್ವರಿ ಶಾಖೆಯಲ್ಲಿ ಮಾರ್ಚ್ 01ರಂದು ವೈಶಿಷ್ಟ್ಯ ಪೂರ್ಣ ಮಾತೃ ವಂದನಾ ಕಾರ್ಯಕ್ರಮ


ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಥವಾ SPYSS ಎಂಬುದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ಚಚ್ಛ ಹಾಗೂ ಸ್ವಸ್ಥ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಗತ್ತಿನ ಅತೀ ದೊಡ್ಡ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದು. 1980ರಲ್ಲಿ ನಮ್ಮ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಸಣ್ಣದೊಂದು ಯೋಗ ಶಾಖೆಯ ಮೂಲಕ ಪ್ರಾರಂಭವಾದ ಈ ಸಂಸ್ಥೆ ಇಂದು ಜಗತ್ತಿನಾದ್ಯಂತ ಸುಮಾರು 700ಕ್ಕೂ ಅಧಿಕ ಶಾಖೆಗಳನ್ನು ಹಾಗೂ ಸುಮಾರು 40000ಕ್ಕೂ ಅಧಿಕ ಸ್ವಯಂ ಸೇವಕ ಶಿಕ್ಷಕರನ್ನು ಒಳಗೊಂಡಿರುವುದು ಮಾತ್ರವಲ್ಲದೆ ಹತ್ತು ಲಕ್ಷಕ್ಕೂ ಅಧಿಕ ಯೋಗ ಬಂಧುಗಳನ್ನು ಒಳಗೊಂಡಿರುವ ಸಂಸ್ಥೆಯಾಗಿದೆ. SPYSS ಸಂಘಟನೆ ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಉಚಿತವಾಗಿ ಯೋಗ ಶಿಕ್ಷಣವನ್ನು ನೀಡುವ ಮಹಾನ್ ಕಾರ್ಯವನ್ನು ಕಳೆದ ೪ ದಶಕಗಳಿಂದ ನಿರ್ವಹಿಸುತ್ತಾ ಬಂದಿದೆ. ಈ ಸಂಘಟನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯಾರೊಬ್ಬರು ಕೂಡ ಯಾವುದೇ ಹಣ ಅಥವಾ ಇನ್ನಿತರ ವೈಯಕ್ತಿಕ ಲಾಭವನ್ನು ಪಡೆಯದೇ ಉಚಿತವಾಗಿ ಸೇವೆ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಸ್ವಯಂ ಪ್ರೇರಿತವಾಗಿ ಕೆಲಸ ನಿರ್ವಹಿಸುತ್ತಿರುವ ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿದೆ.

ಸಂಸ್ಕಾರ, ಸೇವೆ ಹಾಗೂ ಸಂಘಟನೆ ಎಂಬ ಧ್ಯೇಯ ವಾಕ್ಯದೊಂದಿಗೆ ಸೇವೆ ಸಲ್ಲಿಸುತ್ತಿರುವ SPYSS ಸಂಸ್ಥೆ ಕರಿಂಕ ಶ್ರೀ ದುರ್ಗಾಪರಮೇಶ್ವರಿ ತಾಯಿಯ ಆಶೀರ್ವಾದದೊಂದಿಗೆ ಕಳೆದ ಎರಡು ತಿಂಗಳುಗಳ ಹಿಂದೆ ಶ್ರೀ ದುರ್ಗಾಪರಮೇಶ್ವರಿ ಶಾಖೆ ಎಂಬ ಹೆಸರಿನಲ್ಲಿ ಆರಂಭಗೊಂಡು 48ಕ್ಕೂ ಅಧಿಕ ದಿನಗಳಿಂದ ಉಚಿತವಾದ ಯೋಗ ಶಿಕ್ಷಣವನ್ನು ನೀಡುತ್ತಾ ಬಂದಿದೆ. ನೂರಾರು ಯೋಗ ಬಂಧುಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದು, ಈಗಾಗಲೇ ಸಂಸ್ಥೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜಿಸಿರುವ ಹಲವಾರು ಕಾರ್ಯಕ್ರಮಗಳಲ್ಲಿ ಕರಿಂಕ ಶಾಖೆಯ ಯೋಗ ಬಂಧುಗಳು ಭಾಗವಹಿಸಿದ್ದರು. ಮೇಲು-ಕೀಳು, ಬಡವ-ಶ್ರೀಮಂತ, ಹಿರಿಯ-ಕಿರಿಯ ಎಂಬ ಯಾವುದೇ ಭೇದ ಭಾವವಿಲ್ಲದೆ ಎಲ್ಲಾರನ್ನೂ ಅಣ್ಣ-ಅಕ್ಕ ಎಂಬ ಭ್ರಾತೃತ್ವ ಭಾವದಿಂದ ಕಾಣುವ ವೈಶಿಷ್ಟ್ಯವನ್ನು ಈ ಸಂಘಟನೆಯಲ್ಲಿ ಕಾಣಬಹುದು.

ಸಂಸ್ಕೃತಿಯನ್ನು ಮರೆತು ಪಾಶ್ವಿಮಾತ್ಯ ಸಂಸ್ಕೃತಿಯೇ ನಮ್ಮ ಸಂಸ್ಕೃತಿ ಎಂದು ಆಚರಿಸುವ ಈ ಕಾಲಘಟ್ಟದಲ್ಲಿ ಸಮಾಜವನ್ನು ಪರಿವರ್ತನೆ ಮಾಡಲು SPYSS ನಂತಹ ಸಂಘಟನೆಗಳು ನಮ್ಮ ಸನಾತನ ಸಂಸ್ಕೃತಿಯನ್ನು ಯುವ ಜನತೆಗೆ ತಿಳಿಸುವ ಮಹಾತ್ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಸನಾತನ ಸಂಸ್ಕೃತಿಯಲ್ಲಿ 'ತಾಯಿ'ಗೆ ವಿಶೇಷ ಸ್ಥಾನವಿದೆ. ಈ ತಾಯಿಯ ಕುರಿತಾದ 'ಮಾತೃ ವಂದನಾ', 'ಮಾತೃ ಧ್ಯಾನ', 'ಮಾತೃ ಭೋಜನ' ಎಂಬ ವಿಶೇಷ ಕಾರ್ಯಕ್ರಮವೊಂದನ್ನು ಕರಿಂಕ ಶ್ರೀ ದುರ್ಗಾಪರಮೇಶ್ವರಿ ಶಾಖೆಯ ಯೋಗಬಂಧುಗಳು; ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರ ಮಾರ್ಗದರ್ಶನದಲ್ಲಿ ಆಯೋಜಿಸಿದ್ದು, ಈ ಕಾರ್ಯಕ್ರಮವೂ ಬರುವ ಮಾರ್ಚ್ 01ರ ಭಾನುವಾರದಂದು ಶ್ರೀ ದೇವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕಾರ್ಯಕ್ರಮವೂ ಸರಿಯಾಗಿ ಸಂಜೆ 3.30ಕ್ಕೆ ಆರಂಭವಾಗಲಿದೆ.

ಈ ವಿಶೇಷ ಕಾರ್ಯಕ್ರಮದ ಪೂರ್ವಸಿದ್ದತೆಗಳು ಈಗಾಗಲೇ ಭರದಿಂದ ಸಾಗುತ್ತಿದ್ದು, ಸಂಸ್ಥೆಯ ಜಿಲ್ಲಾ ಸಂಘಟನ ಪ್ರಮುಖರು ಭಾಗವಹಿಸಲಿದ್ದಾರೆ. ಶಾಖೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ಅನ್ನಡ್ಕ ಅಣ್ಣವನರ ಮಾರ್ಗದರ್ಶನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲಾ ಯೋಗ ಬಂಧುಗಳು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಪರಿಸರದ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರಲಾಗಿದೆ. ಹರಿ ಓಂ

ಸ್ಥಳ: ಶ್ರೀ ದೇವಿ ಕಲ್ಯಾಣ ಮಂಟಪ ಕರಿಂಕ

ದಿನಾಂಕ: 01-03-2026 ಮಾರ್ಚ್ ಸಂಜೆ 3.30ಕ್ಕೆ ಪ್ರಾರಂಭ