ಮೂಡುಬಿದಿರೆ ನಗರದಲ್ಲಿ ನೋ ಎಂಟ್ರಿ ನಿಯಮ ಉಲ್ಲಂಘನೆ: ಕಟ್ಟುನಿಟ್ಟಿನ ಕ್ರಮಕ್ಕೆ ಶಾಸಕರಿಂದ ಸೂಚನೆ


ಮೂಡುಬಿದಿರೆ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ನೋ ಎಂಟ್ರಿ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಸೂಚನೆ ನೀಡಿದ್ದಾರೆ.

ಮಂಗಳವಾರ ನಡೆದ “ನಮ್ಮ ಮೂಡುಬಿದಿರೆ” ಸಂಯೋಜನಾ ಸಭೆಯಲ್ಲಿ ಮಾತನಾಡಿದ ಅವರು, 12 ಮತ್ತು 16 ಚಕ್ರಗಳ ಭಾರಿ ವಾಹನಗಳು ಕಡ್ಡಾಯವಾಗಿ ರಿಂಗ್‌ರೋಡ್ ಮೂಲಕವೇ ಸಂಚರಿಸಬೇಕು ಎಂದು ಹೇಳಿದರು. ಅನಗತ್ಯವಾಗಿ ನಗರ ಪ್ರವೇಶಿಸುವ ವಾಹನಗಳನ್ನು ತಕ್ಷಣ ಹಿಂದಿರುಗಿಸುವುದಲ್ಲದೆ, ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ನಗರದಲ್ಲಿ ನೋ ಎಂಟ್ರಿ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಹಾಗೂ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನೋ ಎಂಟ್ರಿ ಪ್ರದೇಶಗಳಲ್ಲಿ ವಾಹನಗಳ ಸಂಚಾರದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಅಪಘಾತಗಳ ಸಾಧ್ಯತೆ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಸ್ಥಳೀಯ ರೋಟರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸೂಕ್ತ ನಾಮಫಲಕಗಳನ್ನು ಅಳವಡಿಸುವ ಯೋಜನೆ ರೂಪಿಸಬಹುದಾಗಿದೆ ಎಂದು ಶಾಸಕರು ಹೇಳಿದರು.

ವಿದ್ಯಾಗಿರಿ–ಮಾಸ್ತಿಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಾಸ್ತಿಕಟ್ಟೆ ರಸ್ತೆ ದುರಸ್ತಿಗೆ ಈಗಾಗಲೇ ಪುರಸಭೆಗೆ ಸೂಚನೆ ನೀಡಲಾಗಿದೆ. ಬೆಳ್ತಂಗಡಿ, ಕಾರ್ಕಳ ಹಾಗೂ ಬಿ.ಸಿ.ರೋಡ್ ಕಡೆಗೆ ತೆರಳುವ ವಾಹನ ಸವಾರರಿಗೆ ಅನುಕೂಲವಾಗುವಂತೆ ಪುರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು. ಇದರಿಂದ ಭಾರಿ ವಾಹನಗಳು ನಗರ ಪ್ರವೇಶಿಸುವುದು ಕಡಿಮೆಯಾಗಲಿದೆ ಎಂದರು.

ಈ ಕುರಿತು ಸಾರ್ವಜನಿಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಸಂಚಾರ ಸಭೆ ನಡೆಸಿ ಜಾಗೃತಿ ಮೂಡಿಸಲು ಸಹ ಸೂಚನೆ ನೀಡಲಾಗಿದೆ.

ಸಂಚಾರ ದಟ್ಟಣೆ ನಿವಾರಣೆಗೆ ಸಾವಿರ ಕಂಬದ ಬಸದಿಯ ಬಳಿ ವಾಹನಗಳು ಸ್ಪಷ್ಟವಾಗಿ ಕಾಣುವಂತೆ ಕನ್ನಡಿ ಅಳವಡಿಸಲು ಪುರಸಭೆಗೆ ಸೂಚಿಸಲಾಗಿದೆ. ಹಳೆಯ ಪೊಲೀಸ್ ಠಾಣೆ ಬಳಿಯ ಸಂಚಾರ ಸಮಸ್ಯೆ ನಿವಾರಣೆಗೆ ಹಳೆಯ ಕಟ್ಟಡ ತೆರವುಗೊಳಿಸಲಾಗಿದ್ದು, ಆ ಪ್ರದೇಶದಲ್ಲಿ ವಾಹನ ಸಂಚಾರ ಸುಗಮವಾಗಲು ಸಣ್ಣ ಡಿವೈಡರ್ ನಿರ್ಮಿಸಲು ಪುರಸಭೆಯ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ, ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.