ವೇಣೂರು: ಶ್ರೀ ಕ್ಷೇತ್ರ ಕಾರಜೆಯಲ್ಲಿ ವಿಜೃಂಭನೆಯಿಂದ ಜರುಗಿದ ಶ್ರೀ ಮಾರವಾಂಡಿ ಮತ್ತು ಮೈಸಂದಾಯ ದೈವಗಳ ನೇಮೋತ್ಸವ


ವೇಣೂರು ಗ್ರಾಮದ ಶ್ರೀ ಕ್ಷೇತ್ರ ಕಾರಜೆಯಲ್ಲಿ ಶ್ರೀ ಮಾರವಾಂಡಿ ಹಾಗೂ ಮೈಸಂದಾಯ ದೈವಗಳ ನೇಮೋತ್ಸವವು 28-03-2026ರ ಶನಿವಾರ ರಾತ್ರಿ ವಿಜೃಂಭನೆಯಿಂದ ನಡೆಯಿತು. ಸಂಪ್ರಾದಯದಂತೆ ಗುತ್ತುಗಳಿಂದ ಶ್ರೀ ಮಾರವಾಂಡಿ ಹಾಗೂ ಮೈಸಂದಾಯ ದೈವಗಳ ಭಂಡಾರವೂ ಶ್ರೀ ಕ್ಷೇತ್ರಕ್ಕೆ ಬಂದು ಭಂಡಾರವೇರಿ ಚೆಂಡು ಹಾಕುವ ಕ್ರಮ ನಡೆದು  ಬಳಿಕ ಸಾರ್ವಜನಿಕ ಆನ್ನಸಂತರ್ಪಣೆ ನಡೆದು ದೈವಗಳಿಗೆ ನೇಮೋತ್ಸವ ನಡೆಯಿತು.

ಮುಂಜಾನೆಯಿಂದಲೇ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣನವರ ನೇತೃತ್ವದಲ್ಲಿ ನವಕ ಕಲಶಾಭಿಷೇಕ, ಪಂಚವರ್ವ ಹಾಗೂ ಸಾರಿಕಂಭದಂತಹ ವಿಧಿವಿಧಾನಗಳನ್ನು ನಡೆಸಲಾಯಿತು. ಕ್ಷೇತ್ರದ ಆಡಳಿತ ಮೋಕ್ತೇಸರರಾದ ಶ್ರೀಮತಿ ರಾಜೇಶ್ವರಿ ವಿಜಯರಾಜ ಅಧಿಕಾರಿ ಮಾರಗುತ್ತು, ಶ್ರೀ ಸುರೇಶ್ ಕುಮಾರ್ ಆರಿಗ ಪೆರ್ಮಾಣು ಗುತ್ತು, ಊರಿನ ಗುರಿಕಾರರು ಹಾಗೂ ವೇಣೂರು, ಗುಂಡೂರಿ, ಬಜಿರೆಯ ಸಾವಿರಾರು ಗ್ರಾಮಸ್ಥರ ಸಮ್ಮುಖದಲ್ಲಿ ದೈವಗಳಿಗೆ ವೈಭವದ ನೇಮೋತ್ಸವ ನಡೆಯಿತು.

120 ವರ್ಷಗಳ ಇತಿಹಾಸ; 2024ರಲ್ಲಿ ಜೀರ್ಣೋದ್ದಾರ:

ಶ್ರೀ ಕ್ಷೇತ್ರ ಕಾರಜೆಗೆ ಸುಮಾರು 120ಕ್ಕೂ ಅಧಿಕ ವರ್ಷಗಳ ಇತಿಹಾಸವಿದ್ದು, ನಾನಾ ಕಾರಣಗಳಿಂದ ಕಳೆದ ಹಲವಾರು ದಶಕಗಳಿಂದ ಯಾವುದೇ ದೈವಿಕ ಕಾರ್ಯಗಳು ನಡೆಯುತ್ತಿರಲಿಲ್ಲ ಇದರಿಂದ ಆ ಪ್ರದೇಶದ ಸ್ಥಳೀಯರಿಗೆ ಆನೇಕ ತೊಂದರೆಗಳು ಎದುರಾದ ಪರಿಣಾಮ ಆ ಪ್ರದೇಶದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಗಿತ್ತು ಆ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಕಾರಜೆಯಲ್ಲಿ ಈ ಹಿಂದೆ ನಡೆಯುತ್ತಿದ್ದಾಂತೆ ನೇಮೋತ್ಸವ ನಡೆಯಬೇಕು ಎಂದು ತೋರಿ ಬಂದಿದ್ದು ಆ ಪ್ರಕಾರ ಆಡಳಿತ ಮೊಕ್ತೇಸರರು, ಊರ ಹಾಗೂ ಪರವೂರ ದೈವ ಭಕ್ತರ ಬೆಂಬಲದಿಂದ ನೂತನವಾದ ದೈವಸ್ಥಾನ ಹಾಗೂ ಶ್ರೀ ಮಾರವಾಂಡಿ ದೈವಕ್ಕೆ ಪಿಲಿಬಂಡಿ(ಹುಲಿಯ ಬಂಡಿ)ಯನ್ನು ನಿರ್ಮಿಸಿ ಆ ಬಳಿಕ ದೈವ ದೇವರ ಪ್ರತಿಷ್ಠೆ, ದೈವಗಳ ನೇಮೋತ್ಸವದ ಕಾರ್ಯಕ್ರಮಗಳನ್ನು 2024ರಲ್ಲಿ ನಡೆಸಲಾಗಿತ್ತು. ಈ ಎಲ್ಲಾ ಕಾರ್ಯಗಳನ್ನು ಶ್ರೀ ವಿಜಯರಾಜ್ ಆಧಿಕಾರಿ ಮಾರಗುತ್ತು ವಹಿಸಿಕೊಂಡು ಸುಂದರ ಹಾಗೂ ಅಚ್ಚುಕಟ್ಟಾದ ಕೆಲಸ ಕಾರ್ಯಗಳು ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಶ್ರೀ ಕ್ಷೇತ್ರದಲ್ಲಿ ನೂತನ ಬಾವಿ ನಿರ್ಮಾಣ:

ಶ್ರೀ ಕ್ಷೇತ್ರ ಕಾರಜೆಯಲ್ಲಿ ದೈವಿಕ ಕಾರ್ಯಗಳ ಬಳಕೆಗೆ ನೂತನ ಬಾವಿಯನ್ನು ಈ ಬಾರಿ ಸ್ಥಳೀಯರು ಹಾಗೂ ಊರವರ ಸಹಕಾರದಿಂದ ನಿರ್ಮಿಸಲಾಗಿದೆ. 

ಪ್ರತಿ ಸಂಕ್ರಾತಿಗೆ ವಿಶೇಷ ಪಂಚ ಪರ್ವಗಳನ್ನು ಕ್ಷೇತ್ರದಲ್ಲಿ ಆಸ್ರಣ್ಣರ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಮತ್ತು ಪ್ರತಿ 2 ವರ್ಷಗಳಿಗೊಮ್ಮೆ ದೈವಗಳ ನೇಮೋತ್ಸವ ನಡೆಸುವುದೆಂದು ತೀರ್ಮಾನಿಸಲಾಗಿದ್ದು ಆ ಪ್ರಕಾರ 2024ರ ಬಳಿಕ ಈ ಬಾರಿ ಭಾರೀ ವಿಜೃಂಭನೆಯಿಂದ ದೈವಗಳ ನೇಮೋತ್ಸವ ನಡೆಯಿತು. ಸಾವಿರಾರು ಜನರು ನೇಮೋತ್ಸವದಲ್ಲಿ ಭಾಗಿಯಾಗುವ ಮೂಲಕ ದೈವ ದೇವರುಗಳ ಕೃಪೆಗೆ ಪ್ರಾತರಾದರು.