ಮಂಗಳೂರು: ದಕ್ಷಿಣ ಕನ್ನಡ ಮೋಟಾರ್ ಸ್ಪೋರ್ಟ್ಸ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾದ ಐಎಂಎಸ್‌ಸಿ ಮೋಟಾರ್ ಸ್ಪೋರ್ಟ್ಸ್‌ನ 25ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾದ 400ನೇ ಐತಿಹಾಸಿಕ ಸ್ಪರ್ಧೆ – ಐಎಂಎಸ್‌ಸಿ ಆಫ್-ರೋಡ್ ಟ್ರೋಫಿ-2026 ಮಾ.28 ಮತ್ತು 29ರಂದು ಮಂಗಳೂರು ಸಮೀಪದ ಸುಂದರ ಪ್ರಕೃತಿ ಸೌಂದರ್ಯ ಹೊಂದಿರುವ ಒಡ್ಡೂರು ಫಾರ್ಮ್ಸ್ ನಲ್ಲಿ ಭರ್ಜರಿ ಯಶಸ್ಸಿನೊಂದಿಗೆ ನೆರವೇರಿತು.
ಪ್ರಕೃತಿ ಮಧ್ಯೆ ರೂಪುಗೊಂಡ ಸವಾಲಿನ ಆಫ್-ರೋಡ್ ಪಥಗಳಲ್ಲಿ ಗರ್ಜಿಸಿದ ಎಂಜಿನ್‌ಗಳು, ಸಾಹಸಮಯ ಚಾಲನೆ ಹಾಗೂ ರೋಚಕ ಸ್ಪರ್ಧೆಗಳು ಎರಡು ದಿನಗಳ ಕಾಲ ಕ್ರೀಡಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ 140ಕ್ಕೂ ಹೆಚ್ಚು ಸ್ಪರ್ಧಿಗಳು 11 ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ಈ ಬಾರಿ ಸ್ಪರ್ಧೆಗೆ ಆಯ್ಕೆಯಾದ ಒಡ್ಡೂರು ಫಾರ್ಮ್ಸ್ ಸ್ಥಳವು ಆಫ್-ರೋಡ್ ಕ್ರೀಡೆಗೆ ಅತ್ಯಂತ ಸೂಕ್ತವಾದ ವಾತಾವರಣ ಒದಗಿಸಿದ್ದು, ಎರಡು ದಿನಗಳ ಅವಧಿಯಲ್ಲಿ 6,000ಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸಿ ಕರಾವಳಿ ಭಾಗದಲ್ಲಿ ಮೋಟಾರ್ ಸ್ಪೋರ್ಟ್ಸ್‌ಗಿರುವ ಅಪಾರ ಅಭಿಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಸ್ಪರ್ಧೆಯ ವಿಜೇತರಿಗೆ ಒಟ್ಟು ರೂ.15 ಲಕ್ಷ ಮೌಲ್ಯದ ನಗದು ಬಹುಮಾನ, ಟ್ರೋಫಿ ಮತ್ತು ಗಿಫ್ಟ್‌ಗಳು ವಿತರಿಸಲಾಯಿತು. ಉನ್ನತ ಮಟ್ಟದ ಆಯೋಜನೆ ಮತ್ತು ಸ್ಪರ್ಧಿಗಳ ಪ್ರತಿಭೆಯಿಂದ ಈ ಸ್ಪರ್ಧೆಯ ಗೌರವ ಮತ್ತಷ್ಟು ಹೆಚ್ಚಿತು.
ಮಾ.28ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸದ ಬ್ರಿಜೇಶ್ ಚೌಟ ಮತ್ತು ಸ್ಪೀಕರ್ ಯು.ಟಿ. ಖಾದರ್ 4x4 ವಾಹನವನ್ನು ಟ್ರ್ಯಾಕ್‌ನಲ್ಲಿ ಚಾಲನೆ ಮಾಡಿ ಮೋಟಾರ್ ಸ್ಪೋರ್ಟ್ಸ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಐಎಂಎಸ್‌ಸಿ ಮೋಟಾರ್ ಸ್ಪೋರ್ಟ್ಸ್ ತಂಡವು ಅನುಸರಿಸಿದ ಉನ್ನತ ಮಟ್ಟದ ಸುರಕ್ಷತಾ ಕ್ರಮಗಳು ಹಾಗೂ ವೃತ್ತಿಪರ ಆಯೋಜನೆ ಕುರಿತು ಗಣ್ಯರು ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದರು.
ಮಾ.29ರಂದು ನಡೆದ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಯು.ಟಿ. ಇಫ್ತಿಕಾರ್ ಅಲಿ, ಎಚ್.ಎನ್. ಬಾಲಕೃಷ್ಣ, ರಾಜೀವಿ ನಾಯಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
25 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿ 400ನೇ ಸ್ಪರ್ಧೆಯನ್ನು ಭರ್ಜರಿಯಾಗಿ ಆಯೋಜಿಸಿರುವುದು ಸಂಘಟನೆಯ ಸಮರ್ಪಣೆ ಹಾಗೂ ಮೋಟಾರ್ ಸ್ಪೋರ್ಟ್ಸ್ ಅಭಿಮಾನಿಗಳ ಅಪಾರ ಬೆಂಬಲದ ಫಲವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಸುರಕ್ಷಿತ ಹಾಗೂ ವಿಶ್ವಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲು ನಾವು ಬದ್ಧರಾಗಿದ್ದೇವೆ ಎಂದು ಆಯೋಜಕರಾದ ಅಶ್ವಿನ್ ನಾಕ್ ತಿಳಿಸಿದ್ದಾರೆ.


