ಮೂಡುಬಿದಿರೆ: ಇಲ್ಲಿನ ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್ 6ರಿಂದ 8ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ‘ಅಷ್ಟೋತ್ತರ ಶತ ಬ್ರಹ್ಮಕಲಶೋತ್ಸವ’ ಅತ್ಯಂತ ವೈಭವದಿಂದ ಜರುಗಲಿದೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ಕಾರ್ಯಕ್ರಮದ ವಿವರ:
ಮಾರ್ಚ್ 6: ಹಸಿರು ಹೊರೆಕಾಣಿಕೆ ಮೆರವಣಿಗೆ
ಸಂಜೆ 4 ಗಂಟೆಗೆ ಸ್ವರಾಜ್ಯ ಮೈದಾನದಿಂದ ದೇವಸ್ಥಾನದವರೆಗೆ ಅದ್ಧೂರಿ ‘ಹಸಿರು ಹೊರೆ ಕಾಣಿಕೆ’ ಮೆರವಣಿಗೆ ನಡೆಯುವ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ.
ಮಾರ್ಚ್ 7: ಭಜನೆ ಮತ್ತು ಸಾಂಸ್ಕೃತಿಕ ವೈಭವ
ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 6ಕ್ಕೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ರಾತ್ರಿ 7ರಿಂದ ಅದೇ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ.
ಮಾರ್ಚ್ 8: ಬ್ರಹ್ಮಕಲಶಾಭಿಷೇಕ ಮತ್ತು ಧಾರ್ಮಿಕ ಸಭೆ
ಧಾರ್ಮಿಕ ವಿಧಿ: ಬೆಳಿಗ್ಗೆ 11:36ಕ್ಕೆ ಪವಿತ್ರ ಬ್ರಹ್ಮಕಲಶಾಭಿಷೇಕ, ದೇವಿದರ್ಶನ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಲಿದೆ.
ಮನೋರಂಜನೆ: ಮಧ್ಯಾಹ್ನ 2:30ಕ್ಕೆ ಯಕ್ಷ-ಗಾನ-ಹಾಸ್ಯ ವೈಭವ ಹಾಗೂ ರಾತ್ರಿ 10ಕ್ಕೆ ‘ಓಂಕಾರ’ ನಾಟಕ ಪ್ರದರ್ಶನಗೊಳ್ಳಲಿದೆ.
ಧಾರ್ಮಿಕ ಸಭೆ: ಸಂಜೆ 6ಕ್ಕೆ ನಡೆಯುವ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಡಾ. ಎಂ. ಮೋಹನ ಆಳ್ವ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಬೃಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ, ಪದ್ಮರಾಜ ಆರ್. ಪೂಜಾರಿ ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.
ನವೀಕೃತಗೊಂಡ ಕ್ಷೇತ್ರ:
ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ. ಪುರಸಭೆಯ ಅನುದಾನದಲ್ಲಿ ಮೇಲ್ಛಾವಣಿ, ದಾನಿಗಳ ನೆರವಿನಿಂದ ತೀರ್ಥ ಬಾವಿ, ಸ್ವಾಗತ ಗೋಪುರ ಹಾಗೂ ಪ್ರಾಂಗಣಕ್ಕೆ ಹಾಸುಕಲ್ಲುಗಳನ್ನು ಅಳವಡಿಸಿ ಕ್ಷೇತ್ರವನ್ನು ಸಜ್ಜುಗೊಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ದೇಜು, ಕಾರ್ಯದರ್ಶಿ ಸಂದೀಪ್, ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಕೊರಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಹೆಗ್ಡೆ, ಬಿ. ಸೀತಾರಾಮ ಆಚಾರ್ಯ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
