ಧರ್ಮಸ್ಥಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಕೈಗಾರಿಕೀಕರಣದ ಕುರಿತು ಸಮಾಲೋಚನೆ ನಡೆಸಲು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಮುಖರು ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ಪದ್ಮವಿಭೂಷಣ ಪುರಸ್ಕೃತರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಪ್ರವರ್ತಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಹಾಗೂ ರಾಜ್ಯ ಸಂಚಾಲಕರಾದ ಕೆ. ಪಿ. ಜಗದೀಶ್ ಅಧಿಕಾರಿ ಅವಳಿ ಜಿಲ್ಲೆಗಳ ಅಭಿವೃದ್ಧಿ ಪಥದ ಕುರಿತು ಮಹತ್ವದ ಮಾತುಕತೆ ನಡೆಸಿದರು.
ಅವರು ಮೊದಲು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಡಾ. ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕರಾವಳಿ ಭಾಗದಲ್ಲಿ ನಡೆಸುತ್ತಾ ಬಂದಿರುವ ಸಮಾಜಮುಖಿ ಕೆಲಸಗಳು ಹಾಗೂ ಪರಿಸರ ಸಂರಕ್ಷಣೆಯ ನಡುವೆ ಕೈಗಾರಿಕಾ ಪ್ರಗತಿ ಸಾಧಿಸುವ ಕುರಿತಾದ ಕಾರ್ಯಚಟುವಟಿಕೆಗಳನ್ನು ಡಾ. ಹೆಗ್ಗಡೆಯವರಿಗೆ ಮನವರಿಕೆ ಮಾಡಿಕೊಡಲಾಯಿತು.
ಅವಿಭಜಿತ ದಕ್ಷಿಣ ಕನ್ನಡ (ದಕ್ಷಿಣ ಕನ್ನಡ ಮತ್ತು ಉಡುಪಿ) ಜಿಲ್ಲೆಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸುಸ್ಥಿರ ಕೈಗಾರಿಕೀಕರಣದ ಅಗತ್ಯತೆ, ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಸಮಿತಿಯು ಹಮ್ಮಿಕೊಂಡಿರುವ ಯೋಜನೆಗಳಿಗೆ ಡಾ. ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು.
ಬಳಿಕ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು, "ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ನಮ್ಮ ಸಮಿತಿಗೆ ಆನೆಬಲ ತಂದಿದೆ. ಜಿಲ್ಲೆಯ ಪರಿಸರವನ್ನು ಕಾಪಾಡಿಕೊಂಡು ಕೈಗಾರಿಕೆಗಳನ್ನು ಬೆಳೆಸುವ ನಮ್ಮ ಆಶಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ," ಎಂದರು.
ರಾಜ್ಯ ಸಂಚಾಲಕ ಕೆ. ಪಿ. ಜಗದೀಶ್ ಅಧಿಕಾರಿ ಅವರು ಮಾತನಾಡಿ, "ಸಮಿತಿಯ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ಹಾಗೂ ಸರ್ಕಾರದ ಮಟ್ಟದಲ್ಲಿ ಕರಾವಳಿಯ ಅಭಿವೃದ್ಧಿಯ ಧ್ವನಿಯನ್ನು ಎತ್ತರಿಸಲು ಡಾ. ಹೆಗ್ಗಡೆ ಅವರೊಂದಿಗೆ ಇಂದಿನ ಚರ್ಚೆ ಪೂರಕವಾಗಿದೆ," ಎಂದು ತಿಳಿಸಿದರು.