ಬಂಟ್ವಾಳ: ಶಬರಿಮಾಲೆ ಯಾತ್ರೆ ಮುಗಿಸಿ ವಾಪಸ್ಸು ತೆರಳುತ್ತಿದ್ದ ಸಂಧರ್ಭದಲ್ಲಿ ರಸ್ತೆ ಬದಿಯಲ್ಲಿ ರಿಪೇರಿಗೆಂದು ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿ ಸಾವನ್ನಪ್ಪಿದ್ದ ಘಟನೆ ಜನವರಿ 9ರ ಶುಕ್ರವಾರ ತಡರಾತ್ರಿ ಕೇರಳದ ಕೋಯಿಕ್ಕೋಡ್ ಬಳಿಯ ಕೊಟ್ಟಕ್ಕಲ್ ಬಳಿ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಕೊಪ್ಪಳದ ದುರ್ಗಾನಗರದ ನಿವಾಸಿ ಆಶೋಕ್ ಪೂಜಾರಿಯವರ ಪುತ್ರ ಲಕ್ಷ್ಮೀಶ ಪೂಜಾರಿ(೧೫ ವರ್ಷ) ಎಂದು ಗುರುತಿಸಲಾಗಿದೆ. ಲಕ್ಷ್ಮೀಶ ಬಂಟ್ವಾಳದ ತಾಲೂಕಿನ ಸಿದ್ದಕಟ್ಟೆ ಶಾಲೆಯ ೯ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಕುರಿಯಾಲ ಗ್ರಾಮದ ಭಕ್ತರ ಗುಂಪೊಂದು ಇನ್ನೋವಾ ಕಾರಿನಲ್ಲಿ ಶಬರಿಮಲೆಗೆ ಪ್ರಯಾಣಿಸಿತ್ತು. ಜನವರಿ 7 ರಂದು ಲಕ್ಷ್ಮೀಶ್ ತನ್ನ ತಂದೆ ಅಶೋಕ್ ಪೂಜಾರಿ ಸಹಿತ ಇತರರು ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪ ಸ್ವಾಮಿಯ ದರ್ಶನದ ಬಳಿಕ ತಂಡ ವಾಪಾಸ್ ಮಂಗಳೂರಿಗೆ ಹಿಂತಿರುಗುತ್ತಿದ್ದ ಸಂಧರ್ಭದಲ್ಲಿ ಕೇರಳದ ಕೋಯಿಕ್ಕೋಡ್ ಬಳಿಯ ಕೊಟ್ಟಕ್ಕಲ್ ಎಂಬಲ್ಲಿ ತಮ್ಮ ಇನ್ನೋವಾ ಕಾರು ಕೈ ಕೊಟ್ಟ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಿ ಬಾನೇಟ್ ಓಪನ್ ಮಾಡಿ ಕಾರನ್ನು ಪರಿಶೀಲಿಸುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಬಂದ ಲಾರಿಯೊಂದು ಏಕಾಏಕಿಇನ್ನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಬಳಿ ನಿಂತಿದ್ದವರೆಲ್ಲರೂ ರಸ್ತೆಗೆ ಏಸೆಯಲ್ಪಟ್ಟರು, ಈ ಸಂಧರ್ಭದಲ್ಲಿ ಬಾಲಕ ಲಕ್ಷ್ಮೀಶ್ ಲಾರಿಯ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಾಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವರದರಾಜ್ ಎನ್ನುವ ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇತರರಿಗೂ ಸಣ್ಣಪುಟ್ಟ ಗಾಯಗಳಾಗಿರುವ ಬಗ್ಗೆಯೂ ವರದಿಯಾಗಿದೆ.
