ಬನ್ನಡ್ಕ ಸತ್ಯನಾರಯಣ ಪೂಜೆ: ಧರ್ಮ ಸಮಾಜದಲ್ಲಿ ದೊಂಬಿ ಸೃಷ್ಟಿಸುವುದಿಲ್ಲ ಬದಲಾಗಿ ಬದುಕಿಗೆ ಬೆಳಕು ನೀಡುತ್ತದೆ- ಡಾ.ವಿನಾಯಕ ಭಟ್ ಗಾಳಿಮನೆ


ಮೂಡುಬಿದಿರೆ: ಧರ್ಮ ಎನ್ನುವುದು ಸಮಾಜದಲ್ಲಿ ಗೊಂದಲ ಅಥವಾ ದೊಂಬಿ ಸೃಷ್ಟಿಸಲು ಇರುವುದಲ್ಲ; ಅದು ಬದುಕಿಗೆ ಬೆಳಕು ನೀಡಲು ಇರುವ ಮಹತ್ವದ ಮಾರ್ಗ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಖ್ಯಾತ ಯಕ್ಷಗಾನ ಅರ್ಥದಾರಿಗಳಾದ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು. ಇಂದಿನ ದಿನಗಳಲ್ಲಿ ಧರ್ಮದ ನಿಜವಾದ ಅರ್ಥವನ್ನು ಅರಿಯದೇ, ಧರ್ಮವನ್ನು ಬದಿಗೊತ್ತಿ ಕೆಟ್ಟ ನಡವಳಿಕೆಗಳ ಮೂಲಕ ಧರ್ಮಾಂಧತೆ ಹಾಗೂ ಮಾತಾಂಧತೆಯತ್ತ ಸಾಗುತ್ತಿರುವುದು ವಿಷಾದಕರ ಸಂಗತಿಯೆಂದು ಅವರು ಅಭಿಪ್ರಾಯಪಟ್ಟರು.

ಅವರು ಮೂಡುಬಿದಿರೆ ಬನ್ನಡ್ಕದಲ್ಲಿ ಆಯೋಜಿಸಲಾದ 46ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ದಿಕ್ಸೂಜಿ ಭಾಷಣಕಾರರಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ಧುರೀಣ ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕದ ಅಧ್ಯಕ್ಷರಾದ ಎಂ. ದಯಾನಂದ ಪೈ ವಹಿಸಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಅರುಣ್ ಪ್ರಕಾಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ನಿತಿನ್ ಕೋಟ್ಯಾನ್ ಹಾಗೂ ರಾಮಚಂದ್ರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಬನ್ನಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಉದ್ಯಮಿ ಅರುಣ್ ಪ್ರಕಾಶ್ ಶೆಟ್ಟಿ, ಧರಣೇಂದ್ರ, ಸಮಿತಿಯ ಅಧ್ಯಕ್ಷ ಸೂರಜ್ ಎಂ. ಬನ್ನಡ್ಕ, ಪೊಲೀಸ್ ಅಧಿಕಾರಿ ರಾಜೇಶ್ ರಾವ್ ಹಾಗೂ ಕಾರ್ಯದರ್ಶಿ ಕೇಶವ ಪೂಜಾರಿ ಮತ್ತು ಉಮೇಶ್ ಡಿ. ಸಾಲ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂತೋಷ್ ನಾಯ್ಕ ನಿರೂಪಿಸಿದರು. ಬಳಿಕ ಬನ್ನಡ್ಕ ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಹಾಗೂ ಕಾರ್ಕಳದ ಡೆನ್ನಾನ ಕಲಾವಿದರಿಂದ ಡೆನ್ನಾನ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಿತು.