ಮನೆಯಲ್ಲಿದ್ದ ದೈವಗಳ ಮೂರ್ತಿ ಕಳ್ಳತನ; ಆರೋಪಿಗಳನ್ನು ತಕ್ಷಣ ಬಂಧಿಸಿದ ಪೋಲಿಸರು


ಮಂಗಳೂರು: ಮನೆಯೊಂದರ ಮೇಲ್ಚಾವಣಿ ಹಂಚು ತೆಗೆದು ಒಳನುಗ್ಗಿ ದೈವಗಳ ಮೂರ್ತಿ ಹಾಗೂ ಪೂಜಾ ಪರಿಕರಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜೀದ್ ಜೆ (ಅಲಿಯಾಸ್ ವಾಜಿ) ಮತ್ತು ಕಳವು ಮಾಲು ಖರೀದಿಸಿದ್ದ ಸಯ್ಯದ್ ಆಲಿ ಎಂಬುವವರನ್ನು ಬಂಧಿಸಲಾಗಿದೆ.
ಘಟನೆಯ ಹಿನ್ನೆಲೆ: ಅಮಿತಾ ಎಂಬುವವರ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳನ್ನು ಇರಿಸಿ ಪೂಜೆ ಮಾಡಲಾಗುತ್ತಿತ್ತು. ಯಾರೂ ವಾಸವಿಲ್ಲದ ಈ ಮನೆಯಲ್ಲಿ ಪ್ರತಿದಿನ ದೀಪ ಹಚ್ಚಿ ಬೀಗ ಹಾಕಲಾಗುತ್ತಿತ್ತು. ಇದನ್ನು ಗಮನಿಸಿದ ಕಳ್ಳರು, ರಾತ್ರಿ ವೇಳೆ ಮನೆಯ ಹಂಚು ತೆಗೆದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದರು.
ಕಳುವಾದ ವಸ್ತುಗಳ ವಿವರ: ಸುಮಾರು ₹1,00,000 ಲಕ್ಷಕ್ಕೂ ಅಧಿಕ ಮೌಲ್ಯದ ಈ ಕೆಳಗಿನ ವಸ್ತುಗಳನ್ನು ಕಳವು ಮಾಡಲಾಗಿತ್ತು:
ದೈವದ ಮೂರ್ತಿಗಳು: ತಾಮ್ರದ ಪಸಪ್ಪ ದೈವದ ಮೂರ್ತಿ, ಬೆಳ್ಳಿಯ ಮಂತ್ರದೇವತೆ ಮೂರ್ತಿ ಹಾಗೂ ತಾಮ್ರದ ಕಲ್ಲುರ್ಟಿ-ಪಂಜುರ್ಲಿ ಮೂರ್ತಿ.
ಪೂಜಾ ಪರಿಕರಗಳು: ಬೆಳ್ಳಿಯ ಕಡ್ಸಲೆ, 2 ತಾಮ್ರದ ಘಂಟೆಗಳು ಮತ್ತು 4 ತಾಮ್ರದ ಚೆಂಬುಗಳು.
ತನಿಖೆ ಮತ್ತು ಬಂಧನ: ದೂರು ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದರು. ಮೊದಲ ಬಂಧನ: ಶಂಕಿತ ವಾಜೀದ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.

ಕಳ್ಳತನ ಮಾಡಿದ ತಾಮ್ರ ಮತ್ತು ಹಿತ್ತಾಳೆಯ ವಸ್ತುಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಯ್ಯದ್‌ನನ್ನು ಬಂಧಿಸಿ, ಕಳುವಾದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದೈವದ ಆರಾಧನೆಗೆ ಹೆಸರಾದ ಈ ಭಾಗದಲ್ಲಿ ದೈವಗಳ ಮೂರ್ತಿಗಳೇ ಕಳುವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.