ತುಳುನಾಡಿನಲ್ಲಿ ಮತ್ತೇ ಸದ್ದು ಮಾಡುತ್ತಿದೆ ಕೋಳಿ ಅಂಕದ ಕೂಗು.?


ಮಂಗಳೂರು: ತುಳುನಾಡಿನ ಹಲವಾರು ಕಡೆಗಳಲ್ಲಿ ಕೋಳಿ ಅಂಕಗಳು ನಡೆಯುವುದು ಸರ್ವೇ ಸಾಮಾನ್ಯವಾಗಿತ್ತು. ಅದರೆ ಸರ್ಕಾರದ ಕಠಿಣ ನಿರ್ಧಾರದಿಂದ ಇತ್ತೀಚಿನ ದಿನಗಳಲ್ಲಿ ಕೋಳಿ ಅಂಕಗಳು ಬಹಿರಂಗವಾಗಿ ನಡೆಯುವುದಕ್ಕೆ ಕಡಿವಾಣ ಹಾಕಲಾಯಿತು. ಕೋಳಿ ಅಂಕಗಳನ್ನು ನಡೆಸುವುದರಿಂದ ಜೂಜು ದೊಡ್ಡ ಮಟ್ಟದಲ್ಲಿ ನಡೆಯುವುದಲ್ಲದೆ, ಇದರಿಂದ ಬಹಳಷ್ಟು ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಕಾರಣಕ್ಕೆ ಕೋಳಿ ಅಂಕಗಳಿಗೆ ಕಡಿವಾಣ ಹಾಕಲು ಸರ್ಕಾರ ಹಾಗೂ ಪೋಲಿಸ್ ಇಲಾಖೆ ಕಳೆದ ವರ್ಷದಿಂದಲೇ ನಿರ್ಧಾರಿಸಿದೆ. ಅದರೆ ಸದ್ಯ ಈ ಕುರಿತಾದ ಪರ ವಿರೋಧ ಚರ್ಚೆಗಳು ಮತ್ತೇ ಆರಂಭವಾಗಿದೆ.

ತುಳುನಾಡಿನ ಬಹುತೇಕ ದೈವಸ್ಥಾನಗಳ ವರ್ಷಾವದಿ ಜಾತ್ರೆಯ ಪೂರ್ವ ಹಾಗೂ ನಂತರದಲ್ಲಿ ಈ ಕೋಳಿ ಅಂಕಗಳನ್ನು ನಡೆಸುವುದು ಆಚರಣೆಯ ಒಂದು ಭಾಗವಾಗಿದ್ದು ಸದ್ಯ ಇದಕ್ಕೆ ಅವಕಾಶ ನೀಡಲಾಗುತ್ತಿಲ್ಲ ಇದರಿಂದ ತುಳುವರ ಸಂಪ್ರದಾಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರಲಾರಂಭಿಸಿದೆ. ಈ ನಡುವೆ ವಿಟ್ಲದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಜಾತ್ರೆ ನಡೆದ ನಂತರ ಯಾವುದೇ ಹಣ ಅಥವಾ ಜೂಜು ಕಟ್ಟದೆ ಕೋಳಿ ಅಂಕಗಳನ್ನು ನಡೆಸುವುದು ನಡೆದು ಬಂದ ವಾಡಿಕೆ. ಈ ಬಾರಿಯೂ ಆ ಪ್ರಕಾರ ನಡೆದಿದ್ದು ಈ ಸಂಧರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಕೋಳಿ ಅಂಕಗಳನ್ನು ನಡೆಸಬಾರದು ಎಂದು ತಿಳಿಸಿ ಅಲ್ಲಿದ್ದವರನ್ನು ಸ್ಥಳದಿಂದ ಹೋಗುವಂತೆ ತಿಳಿಸಿದ್ದಾರೆ. ಅದರೆ ಆ ಬಳಿಕ ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಕೋಳಿ ಅಂಕ ಸಂಜೆಯ ತನಕ ನಡೆಸಲು ಅವಕಾಶ ನೀಡಬೇಕು ಇಲ್ಲಿ ಯಾವುದೇ ಜೂಜು ಇಲ್ಲದೆ ಸಾಂಪ್ರದಾಯ ಬದ್ದವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೋಳಿ ಅಂಕಕ್ಕೆ ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ಸರ್ಕಾರವೇ ಕ್ರಮ ಕೈಗೊಂಡಿದ್ದು ಅದರೆ ಅದೇ ಪಕ್ಷದ ಶಾಸಕರೇ ಇದನ್ನು ಬೆಂಬಲಿಸುವ ಮೂಲಕ ಸರ್ಕಾರದ ನಿಯಮವನ್ನು ಸ್ವಪಕ್ಷೀಯರೇ ಪಾಲಿಸದಂತಾಗಿದೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ತುಳುನಾಡಿನಲ್ಲಿ ಜಾತ್ರೆ ಅಂಗವಾಗಿ ನಡೆಯುವ ಕೋಳಿ ಅಂಕಗಳಿಗೆ ತನ್ನದೇ ಅದ ಹಿನ್ನೆಲೆ ಇದ್ದು ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಶಾಸಕರು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಜಾತ್ರೆಗಳು ಆರಂಭವಾಗುತ್ತಿರುವ ಈ ಸಂಧರ್ಭದಲ್ಲಿ ಕೋಳಿ ಅಂಕದ ಕುರಿತಾದ ಚರ್ಚೆಗಳು ಮತ್ತೇ ಮುನ್ನಲೆಗೆ ಬಂದಿದ್ದು ಇದಕ್ಕೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.