ಜವನೆರ್ ಬೆದ್ರ 'ಕೃಷ್ಣೋತ್ಸವ-2025' ಯಶಸ್ವಿಯಾಗಿ ಸಂಪನ್ನ; ಆಳ್ವಾ'ರಿಗೆ "ಕೃಷ್ಣೋತ್ಸವ" ಪ್ರಶಸ್ತಿ ಪ್ರಧಾನ, ನಾಲ್ವರು ಸಾಧಕರಿಗೆ ಗೌರವ ಸನ್ಮಾನ.!

ಮೂಡುಬಿದ್ರೆ: ಬೆದ್ರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೯ನೇ ವರ್ಷದ ವೈಭವದ ಮೊಸರು ಕುಡಿಕೆಗೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಬೆದ್ರ ಜವನೆರ್ ಬೆದ್ರ ಫೌಂಡೇಶನ್(ರಿ) ನೇತೃತ್ವದಲ್ಲಿ ನಡೆದ ಕೃಷ್ಣೋತ್ಸವ ಕಾರ್ಯಕ್ರಮವೂ ನೃತ್ಯ, ಸಂಗೀತ, ಸನ್ಮಾನ, ಯಕ್ಷಗಾನ ಎಂಬ ಕಾರ್ಯಕ್ರಮಗಳ ಜೊತೆಗೆ ಯಶಸ್ವಿಯಾಗಿ ನಡೆಯಿತು.

ಕೆ.ಅಮರನಾಥ ಶೆಟ್ಟಿ ವೃತ್ತದ ಬಳಿ ವೇಣೂರು ಕೃಷ್ಣಯ್ಯರ ಹೆಸರಿನಲ್ಲಿ ನಿರ್ಮಾಣಗೊಂಡಿದ್ದ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಂಗೀತ, ನೃತ್ಯ, ಯಕ್ಷಗಾನದಂತಹ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಮಂಗಳೂರಿನ ಖ್ಯಾತ ಜರ್ನಿ ಥಿಯೇಟರ್ ಗ್ರೂಪ್ ನಿಂದ ರಂಗ ಸಂಗೀತ ಹಾಗೂ ಜನಪದ ಗೀತೆಯ ಕಾರ್ಯಕ್ರಮ ನಡೆಯಿತು.

ಡಾ. ಮೋಹನ್ ಆಳ್ವಾರಿಗೆ 'ಕೃಷ್ಣೋತ್ಸವ-೨೦೨೫' ಪ್ರಶಸ್ತಿ, ನಾಲ್ವರು ಸಾಧಕರಿಗೆ ಗೌರವ ಸನ್ಮಾನ

ಸಂಗೀತ ಕಾರ್ಯಕ್ರಮಗಳು ನಡೆದ ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಅಧುನಿಕ ಶಿಕ್ಷಣದ ಹರಿಕಾರ, ಮೂಡಬಿದ್ರೆಯನ್ನು ಶಿಕ್ಷಣ ಕಾಶಿ ಎಂದು ವಿಶ್ವದ್ಯಾಂತ ಗುರುತಿಸುವಂತೆ ಮಾಡಿದ ಡಾ. ಎಂ ಮೋಹನ್ ಆಳ್ವಾರಿಗೆ ೨೦೨೫ನೇ ಸಾಲಿನ "ಕೃಷ್ಣೋತ್ಸವ" ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಾಡಲಾಯಿತು. ಆ ಬಳಿಕ ಯಕ್ಷಗಾನದಲ್ಲಿನ ವಿಶೇಷ ಸಾಧನೆಗೆ ಪಟ್ಲ ಸತೀಶ್ ಶೆಟ್ಟಿ, ಸಂಗೀತ ನಿರ್ದೇಶಕ ಹಾಗೂ ಗಾಯಕ ಯಶವಂತ್ ಎಂ.ಜಿ ಹಾಗೂ ಸಿನಿಮಾ ಕ್ಷೇತ್ರದವರ ದೀಕ್ಷಿತ್ ಅಂಡಿಂಜೆ ಮತ್ತು ಯುವಾ ಶೆಟ್ಟಿಯವರಿಗೆ ಗೌರವ ಸನ್ಮಾನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಶಾಸಕ ಉಮನಾಥ್ ಕೋಟ್ಯಾನ್, ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಆಷ್ಣಮಿಯ ಸಾಂಪ್ರದಾಯಿಕ ಕ್ರೀಡೆಗಳ ಜೊತೆಗೆ ಭಗವದ್ಗೀತಾ ಕಂಠಪಾಠ ಸ್ವರ್ಧೆ, ಭಕ್ತಿ ಗೀತಾ ಸ್ಪರ್ಧೆಯ ಜೊತೆಗೆ ಇನ್ನಿತರ ಸ್ಪರ್ಧೆಗಳನ್ನು ಕಳೆದೊಂದು ವಾರದ ಮೊದಲೇ ಮಕ್ಕಳಿಗೆ ಆಯೋಜಿಸಲಾಗಿತ್ತು. ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದ ನೂರಕ್ಕೂ ಅಧಿಕ ಮಕ್ಕಳು ಹಾಗೂ ವಯಸ್ಕರಿಗೆ ಬಹುಮಾನವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ತಂಡದಿಂದ 'ಚಂದ್ರವಾಲಿ ವಿಲಾಸ' ಎಂಬ ಹಾಸ್ಯಮಯ ತುಳು ಯಕ್ಷಗಾನ ಪ್ರಸಂಗವನ್ನು ನಡೆಸಿಕೊಟ್ಟರು. 

ಸ್ವಚ್ಚ ಕೃಷ್ಣೋತ್ಸವ ಎಂಬ ಪರಿಕಲ್ಪನೆಯಲ್ಲಿ ಆರಂಭಿಸಿದ ಈ ಬಾರಿಯ ಕೃಷ್ಣೋತ್ಸವದಲ್ಲಿ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಲಾಯಿತು. ಈ ಬಾರಿಯ 'ಕೃಷ್ಣೋತ್ಸವ'ದ ಪ್ರಮುಖ ಆಕರ್ಷಣೆಯಾಗಿ ಹುಲಿ ವೇಷ ಕಾಣಿಸಿಕೊಂಡಿತು. ದೇವಸ್ಥಾನದ ಆವರಣದಲ್ಲಿಯೇ ಪ್ರಪ್ರಥಮವಾಗಿ ಊದು ಪೂಜೆಯನ್ನು ನಡೆಸಿದ ಹುಲಿ ವೇಷ ಕುಣಿತಗಾರರು ಮೆರಣವಣಿಗೆಯಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಒಟ್ಟಾರೆಯಾಗಿ ಈ ಬಾರಿಯ ಕೃಷ್ಣೋತ್ಸವ ಅಚ್ಚುಕಟ್ಟಾಗಿ ನಡೆಯುವುದರ ಜೊತೆಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.


Post a Comment

0 Comments