ಪ್ರಿಯ ಓದುಗರೇ, ನೀವೂ ನಿಮ್ಮ ಸುತ್ತಮುತ್ತಲಿರುವ ಅಥವಾ ನಿಮ್ಮ ತಾಲೂಕು ಅಥವಾ ಜಿಲ್ಲೆಯಲ್ಲಿರುವ ಅದೆಷ್ಟೋ ದೇವಸ್ಥಾನಗಳಿಗೆ ಭೇಟಿ ಕೊಟ್ಟಿರುತ್ತಿರಿ, ಭೇಟಿ ಕೊಟ್ಟಂತಹ ಸಂಧರ್ಭದಲ್ಲಿ ಬಹುತೇಕ ದೇವಸ್ಥಾನಗಳಲ್ಲಿ "ಗೋವಿಂದಾ ಹರಿ ಗೋವಿಂದ" ಎಂಬ ಸ್ತುತಿಯನ್ನು ನೀವೂ ಪಠಿಸಿರಬಹುದು ಅಥವಾ ಕೇಳಿರಬಹುದು ಅದೇ ರೀತಿ ನೀವೂ ಉತ್ತರ ಭಾರತದ ಪ್ರಸಿದ್ದ ದೇವಸ್ಥಾನಗಳಿಗೆ ಭೇಟಿ ಕೊಟ್ಟಾಗ "ಹರ್ ಹರ್ ಮಹಾದೇವ್" ಎಂಬ ಸ್ತುತಿ ಪಠಣ ಮಾಡುವ ಪರಿಪಾಠವನ್ನು ಗಮನಿಸಿರಬಹುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ವಿಡಿಯೋಗಳನ್ನು ನೀವೂ ನೋಡಿರಬಹುದು. ಹಾಗಾದರೆ ನಾವು ಹೇಳುತ್ತಿರುವ ಅಥವಾ ಕೇಳಿರುವ ಸ್ತುತಿ ಪಠಣಗಳು ನಿಜವಾಗಿಯೂ ಸರಿಯೇ ಅಥವಾ ಇವುಗಳ ನಿಜವಾದ ಅರ್ಥ, ಹಿನ್ನಲೆಗಳ ಬಗ್ಗೆ ಅದೆಷ್ಟೋ ಜನರಿಗೆ ಮಾಹಿತಿಯೇ ಇಲ್ಲ ಈ ಕುರಿತಾದ ಒಂದು ಅಂಕಣವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಸಣ್ಣ ಪ್ರಯತ್ನ ನಮ್ಮದು.
'ಗೋವಿಂದಾ ಹರಿ ಗೋವಿಂದ' ಅಲ್ಲ "ಗೋವಿಂದಾನಿ ಗೋವಿಂದ":
ಸಾಮಾನ್ಯವಾಗಿ ಶೇ 90ರಷ್ಟು ಜನರು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ 'ಗೋವಿಂದಾ ಹರಿ ಗೋವಿಂದ' ಎಂಬ ಸ್ತುತಿಯನ್ನು ಪುನರುಚ್ಚರಿಸುತ್ತಾರೆ, ಹಾಗೂ ಉಳಿದ ಕೆಲವರು ಇದನ್ನು "ಗೋವಿಂದಾನಿ ಗೋವಿಂದ" ಎಂದು ಹೇಳುತ್ತಾರೆ, ಇದರ ಅರ್ಥ ಗೋವಿಂದ ಅನ್ನಿ ಗೋವಿಂದ, ಸದಾ ಗೋವಿಂದನ ನಾಮಸ್ಮರಣೆ ಮಾಡಿ ಹಾಗೂ ಸದಾ ಗೋವಿಂದ ಗೋವಿಂದ ಎಂದು ಹೇಳಬೇಕು ಎಂದಾಗಿದೆ.
"ಗೋವಿಂದಾನಿ ಗೋವಿಂದ" ಎಂಬುದು ಕನ್ನಡ ಪದವಾಗಿದ್ದು ಭಗವಾನ್ ವಿಷ್ಣು ಅಥವಾ ಗೋವಿಂದನ ನಾಮ ಸ್ಮರಣೆಯನ್ನು ಸದಾ ಮಾಡು ಎಂಬುದು ಇದರ ಅರ್ಥ, ಇದರ ಮೂಲ ಅರ್ಥ ಪ್ರತಿಯೊಂದು ಭಗವಾನ್ ವಿಷ್ಣುವಿಗೆ ಸೇರಿದ್ದು ಅಥವಾ ಭಗವಾನ್ ವಿಷ್ಣುವೇ ಎಲ್ಲಾ ಎಂಬುದಾಗಿದೆ.
"ಹರ ಹರ ಮಹಾದೇವ":
ಪರಮೋಚ್ಚ ಪ್ರಭು ಈಶ್ವರ ಅಥವಾ ಶಿವನನ್ನು ಸ್ಮರಿಸುವಾಗ "ಹರ ಹರ ಮಹಾದೇವ" ಎಂಬ ಸ್ತುತಿಯನ್ನು ಪಠಿಸುವುದು ವಾಡಿಕೆ. ಪ್ರತಿಯೊಂದು ಕಣದಲ್ಲೂ ಶಿವನಿದ್ದಾನೆ ಅಥವಾ ತಾನು ಸಂಪೂರ್ಣವಾಗಿ ಶಿವನಿಗೆ ಭಕ್ತಿಯ ಶರಣಾಗತಿ ಎಂಬ ಅರ್ಥವನ್ನು ಸೂಚಿಸುತ್ತದೆ.
ಯಾವ ದೇವಸ್ಥಾನದಲ್ಲಿ ಯಾವ ಮಂತ್ರ ಸ್ತುತಿಯನ್ನು ಪಠಿಸಬೇಕು.?
ಸಾಮಾನ್ಯವಾಗಿ ನಾವು ಉತ್ತರ ಭಾರತದ ಬಹುತೇಕ ಪ್ರಸಿದ್ದ ದೇವಸ್ಥಾನಗಳಲ್ಲಿ "ಹರ ಹರ ಮಹಾದೇವ" ಎಂಬ ಘೋಷವನ್ನು ಕೇಳಿರುತ್ತೇವೆ ಇದಕ್ಕೆ ಕಾರಣ ಶಿವನ ಸಾನಿಧ್ಯಗಳು ಉತ್ತರ ಭಾರತದಲ್ಲಿ ಹೆಚ್ಚಾಗಿರುವುದರಿಂದ ಶಿವಭಕ್ತರೆಲ್ಲರೂ ತಮ್ಮ ಒಡೆಯ, ಲೋಕಪ್ರಿಯ ಈಶ್ವರನನ್ನು "ಹರ ಹರ ಮಹಾದೇವ" ಎಂದು ಸ್ಮರಿಸುತ್ತಾರೆ.
ನಾವು ತಿಳಿದುಕೊಳ್ಳಬೇಕಾದ ಮುಖ್ಯ ಅಂಶವೆಂದರೆ ನಾವು ಶಿವನ ಸ್ಥಳ ಅಥವಾ ಯಾವುದೇ ಶಿವನ ದೇವಸ್ಥಾನಗಳಿಗೆ ಭೇಟಿ ಕೊಟ್ಟಾಗ "ಹರ ಹರ ಮಹಾದೇವ" ಎಂಬ ಸ್ತುತಿಯನ್ನು ಪಠಿಸಬೇಕು. ಅದೇ ರೀತಿ ಭಗವಾನ್ ವಿಷ್ಣುವಿನ ದೇವಸ್ಥಾನಗಳಿಗೆ ಭೇಟಿ ಕೊಟ್ಟಾಗ "ಗೋವಿಂದಾನಿ ಗೋವಿಂದ" ಎಂಬ ಸ್ತುತಿಯನ್ನು ಪಠಿಸಬೇಕು.
ತುಳುನಾಡಿನ ಶಿವ ಸ್ಥಾನದಲ್ಲಿ ಮೊಳಗಲಿ "ಹರ ಹರ ಮಹಾದೇವ" ಸ್ತುತಿ:
ದೈವ, ದೇವರು, ನಾಗ-ಬೆಮ್ಮೆರುಗಳು ನೆಲೆ ನಿಂತ ತುಳುನಾಡಿನ ಈ ಪುಣ್ಯಭೂಮಿಯ ಮಣ್ಣಿನಲ್ಲಿ ಉಳಿದೆಲ್ಲ ಭಾಗಗಳಿಗಿಂತ ವಿಭಿನ್ನವಾದ ಆಚರಣೆಗಳು ಕಾಣಸಿಗುತ್ತದೆ. ದೇವರ ಅಂಶವಾಗಿರುವ ದೈವಗಳನ್ನು ಹೆಚ್ಚಾಗಿ ಆರಾಧಿಸುವುದು ಇಲ್ಲಿನ ಜನರ ವಾಡಿಕೆ. ದೈವಗಳ ವಿಶಿಷ್ಟ ಆಚರಣೆಯ ಮೂಲಕ ತಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಪರಂಪರೆಯನ್ನು ಮುಂದುವರಿಸಿಕೊಂಡು ಸಾಗುತ್ತಿರುವ ಹೆಗ್ಗಳಿಗೆ ತುಳುವರದ್ದು. ಅಧುನಿಕರಣದ ಹೆಸರಿನಲ್ಲಿ ನಮ್ಮ ವಿಶಿಷ್ಟ ಹಾಗೂ ವಿಭಿನ್ನ ಪರಂಪರೆಗೆ ಪೆಟ್ಟು ಬೀಳುತ್ತಿದೆ ನಾವು ಭೂತ(ಹಿಂದಿನ) ದಲ್ಲಿ ನಂಬಿಕೆ ಉಳ್ಳವರು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನವೇ ನಮಗೆ ದಾರಿದೀಪ ಅದನ್ನು ಇತರರು ತಮ್ಮ ಲಾಭಕ್ಕಾಗಿ ಬಳಸಿಕೊಂಡರೇ ನಾವು ಸುಮ್ಮನಿರುವುದಿಲ್ಲ ಎಂಬ ಎ'ಚ್ಚರಿಕೆಗಳು ಈಗಾಗಲೇ ಹಲವಾರು ಪ್ರತಿಭಟನೆಗಳು ಹಾಗೂ ಸಭೆ-ಸಮಾರಂಭಗಳ ಮೂಲಕ ತಿಳಿಸಲಾಗಿದೆ.
ಕರಾವಳಿಯ ಬಹುತೇಕ ಶಿವ ಅಥವಾ ಈಶ್ವರನ ದೇವಸ್ಥಾನಗಳಲ್ಲಿಯೂ ಹಾಗೂ ಇನ್ನಿತರ ಆನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ "ಗೋವಿಂದಾನಿ ಗೋವಿಂದ" ಎಂಬ ಶ್ಲೋಕಗಳು ಕೇಳಿಬರುವುದು ಸಹಜ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಬಹುತೇಕ ಎಲ್ಲಾ ವೈದಿಕ ಬ್ರಾಹ್ಮಣರು ವೈಷ್ಣವ ಪಂಥವನ್ನು ಪಾಲಿಸುವುದರಿಂದ ಹಾಗೂ ಅವರೆಲ್ಲರೂ ದೇವಸ್ಥಾನಗಳಲ್ಲಿ ಪೂಜಾ ಕಾರ್ಯದಿಗಳನ್ನು ನಡೆಸುವ ವರ್ಗದ ಜನರಾಗಿರುವುದರಿಂದ ಅವರ ಆಚರಣೆಯ ಪ್ರಕಾರ ಪ್ರತಿಯೊಂದು ಭಗವಾನ್ ವಿಷ್ಣುವಿಗೆ ಸಮರ್ಪಣೆಯಾಗಿರುವುದರಿಂದ ಅವರುಗಳು ಎಲ್ಲಾ ಸಾನಿಧ್ಯಗಳಲ್ಲಿ "ಗೋವಿಂದಾನಿ ಗೋವಿಂದ" ಎಂಬ ಸ್ತುತಿಯನ್ನು ಉಲ್ಲೇಖಿಸುವುದು ಸಾಮಾನ್ಯವಾಗಿದೆ.
"ಶಿವ ಕೇಶವರಲ್ಲಿ ಯಾವುದೇ ಭೇದವಿಲ್ಲ" ದೇವರು ಒಬ್ಬನೇ ನಾಮ ಹಲವು ಎಂಬ ಲೋಕೋಕ್ತಿಯಂತೆ ನಾವುಗಳು ದೇವರನ್ನು ಯಾವ ಹೆಸರಿನಿಂದ ಸಂಬೋಧನೆ ಮಾಡಿದರು ದೇವರಿಗೆನು ಭೇದ-ಭಾವವಿಲ್ಲ ಅದರೆ ನಮ್ಮ ಸನಾತನ ಧರ್ಮದ ಆಚಾರ ಪದ್ದತಿಗಳನ್ನು ನಮ್ಮ ಮುಂದಿನ ತಲೆಮಾರುಗಳಿಗೆ ತಿಳಿಸಿಕೊಡುವ ಉದ್ದೇಶದಿಂದ ಆಯಾ ಸನ್ನಿಧಾನದಲ್ಲಿ ಅದಕ್ಕೆ ಸಂಬಂಧ ಪಟ್ಟ ನಾಮದಿಂದಲೇ ಸ್ತುತಿಸುವುದು ಉತ್ತಮ.
ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣವೇ ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ - ಈ ಪ್ರಸಿದ್ಧ ಶ್ಲೋಕವು ಶಿವ ಮತ್ತು ಕೇಶವ (ವಿಷ್ಣು) ಇಬ್ಬರೂ ಬೇರೆ ಬೇರೆಯಲ್ಲ ಎಂದು ಹೇಳುತ್ತದೆ. ಶಿವ ಹಾಗೂ ವಿಷ್ಣುವಿನ ತತ್ವ ಒಂದೇ. ಈ ರೀತಿಯಾಗಿ ನಮ್ಮ ಪುರಾಣಗಳು ಹಲವಾರು ಉದಾಹರಣೆಗಳನ್ನು ನೀಡುತ್ತವೆ. ಅದ್ದರಿಂದ ಮುಂದಿನ ಬಾರಿ ನೀವೂ ಯಾವುದೇ ಶಿವನ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ "ಹರ ಹರ ಮಹಾದೇವ" ಎಂಬ ಸ್ತುತಿಯನ್ನು ಪಠಿಸಿ ಹಾಗೂ ವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ "ಗೋವಿಂದಾನಿ ಗೋವಿಂದ" ಎಂದು ಹೇಳಲು ಮರೆಯದಿರಿ.

0 Comments