ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ; 6 ವರ್ಷದ ಬಾಲಕಿ ಸಾವು


ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ಸಮೀಪ ಬುಧವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಎಲ್‌ಕೆಜಿ ವಿದ್ಯಾರ್ಥಿನಿ ಚಿರನ್ವಿ (6) ಮೃತಪಟ್ಟಿದ್ದು, ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.

ಮೃತ ಬಾಲಕಿ ಚಿರನ್ವಿ ಬಿಳಿಯೂರಿನ ತೋಟ ಹೌಸ್ ನಿವಾಸಿಗಳಾದ ಚಂದ್ರಶೇಖರ ಮತ್ತು ಅನಿತಾ ದಂಪತಿಯ ಪುತ್ರಿ. ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮತ್ತೋರ್ವ ಗಾಯಾಳು ಪೆರ್ನೆಯ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಗಾಯಾಳು ಮಕ್ಕಳಿಗೂ ವೈದ್ಯಕೀಯ ಆರೈಕೆ ಒದಗಿಸಲಾಗಿದೆ.

ಮಾಹಿತಿಯ ಪ್ರಕಾರ, ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ 24 ಆಸನಗಳ ಮಿನಿ ಬಸ್ ಎಂದಿನಂತೆ ಮಕ್ಕಳನ್ನು ಮನೆಗಳಿಗೆ ಬಿಡಲು ಸಂಜೆ ಹೊರಟಿತ್ತು. ಮಾಣಿ, ಭರಣಿಕೆರೆ ಮಾರ್ಗವಾಗಿ ಕಲ್ಲೆಟ್ಟಿಗೆ ತಲುಪಿದ ಬಳಿಕ, ಬರಿಮಾರು ಗ್ರಾಮದ ಶ್ರೀ ಕಾನಲ್ತಾಯ ದೈವಸ್ಥಾನದ ಸಮೀಪ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯ ಬೃಹತ್ ಮರ ಏಕಾಏಕಿ ಬಸ್ ಮೇಲೆ ಉರುಳಿ ಬಿದ್ದಿದೆ.

ದುರ್ಘಟನೆಯ ತೀವ್ರತೆಗೆ ಬಸ್ ಭಾರೀ ಪ್ರಮಾಣದಲ್ಲಿ ಜಖಂಗೊಂಡಿದ್ದು, ಒಳಗಿದ್ದ ಪುಟಾಣಿ ಮಕ್ಕಳು ಭಯಭೀತರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಚಿರನ್ವಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆ ನಡೆದ ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳು ಮಕ್ಕಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಪ್ರದೇಶದಲ್ಲಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಮರ ಉರುಳಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಾಸಕ ರಾಜೇಶ್ ನಾಯ್ಕ್ ತುರ್ತು ಸ್ಪಂದನೆ

ದುರ್ಘಟನೆ ಸಂಭವಿಸಿದ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಅವರು ಸಭೆಯ ನಡುವೆಯೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಸ್ಪತ್ರೆಯ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಗಾಯಾಳು ಮಕ್ಕಳಿಗೆ ಯಾವುದೇ ವಿಳಂಬವಾಗದಂತೆ ತುರ್ತು ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.