ಮೂಡುಬಿದಿರೆ: ಬೆಳುವಾಯಿಯಲ್ಲಿ ಕಾರು ಹಾಗೂ ಬಸ್ಸು ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾಂತಾವರ ಕ್ರಾಸ್ ಬಳಿಯ ಯು-ಟರ್ನ್ ಅನ್ನು ಬುಧವಾರದಿಂದ ಬಂದ್ ಮಾಡಲಾಗಿದೆ. ಕಾಂತಾವರ ಕಡೆಯಿಂದ ಬರುವ ವಾಹನಗಳು ಮೂಡುಬಿದಿರೆ ಕಡೆಗೆ ಹೋಗುವ ಕ್ರಾಸ್ ರಸ್ತೆಯನ್ನು ಏಕಾಏಕಿ ಬಂದ್ ಮಾಡಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಭಾರಿ ಗೊಂದಲ ನಿರ್ಮಾಣವಾಗಿದೆ.ರಸ್ತೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕಾಂತಾವರ ಕಡೆಯಿಂದ ಬರುವ ವಾಹನಗಳು ಬೆಳುವಾಯಿ ಪೇಟೆಗೆ ಹೋಗಲು ಹರಸಾಹಸ ಪಡಬೇಕಾಗಿದೆ. ವಾಹನ ಸವಾರರು ಅನಿವಾರ್ಯವಾಗಿ ಚಿಲಿಂಬಿ ತನಕ ಹೋಗಿ, ಅಲ್ಲಿಂದ ವಾಹನವನ್ನು ತಿರುಗಿಸಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ನಿಯಮಾವಳಿಗಳಿಲ್ಲದೆ ಏಕಾಏಕಿ ರಸ್ತೆ ಬಂದ್ ಮಾಡಿರುವುದರಿಂದ ಎಲ್ಲೆಂದರಲ್ಲಿ ಬರುವ ವಾಹನ ಸವಾರರು ದಿಕ್ಕು ತೋಚದಂತಾಗಿದ್ದು, ತೀವ್ರ ಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಗೊಂದಲದ ನಡುವೆಯೇ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.