ಮೂಡುಬಿದಿರೆಯಲ್ಲಿ 2 ವಿಮಾನಗಳ ದಿಢೀರ್ ಹಾರಾಟ; ಭಾರೀ ಸದ್ದಿಗೆ ಬೆಚ್ಚಿ ಬಿದ್ದ ಸ್ಥಳೀಯ ಜನರು


ಮೂಡುಬಿದಿರೆ: ಮಧ್ಯಾಹ್ನ ಸುಮಾರು ೩.೩೫ರ ವೇಳೆಗೆ ಭಾರೀ ಗದ್ದಲದೊಂದಿಗೆ ಎರಡು ವಿಮಾನಗಳು ಸಮಾನಾಂತರವಾಗಿ ಮೂಡುಬಿದಿರೆ ಆಕಾಶದಲ್ಲಿ ಹಾರಾಡಿದ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಅಕಸ್ಮಾತ್ ಕೇಳಿಬಂದ ಭಾರೀ ಸದ್ದಿಗೆ ಬೆಚ್ಚಿಬಿದ್ದ ಜನರು ಮನೆಗಳಿಂದ ಹೊರಬಂದು ಆಕಾಶದತ್ತ ನೋಡಲು ಆರಂಭಿಸಿದರು. ವಿಮಾನಗಳು ಆಕಾಶದಲ್ಲಿ ಒಂದು ಸುತ್ತು ಹೊಡೆದು ಬಳಿಕ ಕಣ್ಮರೆಯಾಗಿವೆ.

ಈ ಹಾರಾಟ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಸುಖೋಯ್ ಅಥವಾ ಮಿಗ್ ಮಾದರಿಯ ಯುದ್ಧ ವಿಮಾನಗಳಂತೆ ಕಾಣಿಸಿಕೊಂಡ ಈ ವಿಮಾನಗಳು ಅತ್ಯಂತ ವೇಗದಲ್ಲಿ ಚಲಿಸಿದ್ದರಿಂದ ಅವುಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಲಿಲ್ಲ. ಮಂಗಳೂರು ಮತ್ತು ಎಡಪದವು ಭಾಗಗಳಲ್ಲಿಯೂ ಇದೇ ರೀತಿಯ ದೃಶ್ಯ ಕಂಡುಬಂದಿದೆ ಎನ್ನಲಾಗಿದೆ.

ಭಾರೀ ಸದ್ದಿನೊಂದಿಗೆ ಹಾರಾಡಿದ ಈ ಎರಡು ವಿಮಾನಗಳು ಭಾರತೀಯ ವಾಯುಪಡೆಯದಾಗಿರುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ತರಬೇತಿ ಕಾರ್ಯಾಚರಣೆಗಳು ಅಥವಾ ಭದ್ರತಾ ಗಸ್ತಿನ ಭಾಗವಾಗಿ ಇಂತಹ ಜೋಡಿ ಹಾರಾಟ ನಡೆಯುತ್ತದೆ. ಕರಾವಳಿ ಪ್ರದೇಶದ ಭದ್ರತೆ ಹಾಗೂ ಸಮರಾಭ್ಯಾಸದ ಅಂಗವಾಗಿ ಈ ರೀತಿಯ ವೈಮಾನಿಕ ಚಟುವಟಿಕೆಗಳು ನಡೆದಿರಬಹುದೆಂದು ತಿಳಿದುಬಂದಿದೆ.