ಮಧ್ಯಮ ವೇಗಿ ಹೆನಿಲ್ ಪಟೇಲ್ ಅವರ ಉರಿವೇಗದ ದಾಳಿಗೆ ತರಗೆಲೆಯಂತೆ ಉದುರಿದ ಅಮೆರಿಕ ತಂಡ ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಭಾರೀ ಅಂತರದಿಂದ ಪರಾಭವಗೊಂಡಿದೆ. ಈ ಮೂಲಕ ಬಿ ಬಣದಲ್ಲಿರುವ ಆಯುಷ್ ಮ್ಹಾತ್ರೆ ನೇತೃತ್ವದ ಟೀಂ ಇಂಡಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭರವಸೆಯ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದರು. ಆದರೆ ಅದಕ್ಕೂ ಮುಂಚೆ ಬೌಲಿಂಗ್ ನಲ್ಲಿ ಭಾರತಕ್ಕೆ ಬಹಳ ಅಗತ್ಯವಿದ್ದ ವಿಕೆಟ್ ಅನ್ನು ಗಳಿಸಿಕೊಡುವ ಮೂಲಕ ಗಮನ ಸೆಳೆದರು.
ಬುಲಾವಯೋದಲ್ಲಿ ಗುರುವಾರ ನಡೆದ ಅಂಡರ್ 19 ವಿಶ್ವಕಪ್ 2026 ಬಿ ಬಣದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ ಕೇವಲ 35.2 ಓವರ್ ಗಳಲ್ಲೇ 107 ರನ್ ಗಳಿಗೆ ಆಲೌಟ್ ಆಯಿತು. ಮಳೆ ಅಡಚಣೆಯಿಂದಾಗಿ ಭಾರತಕ್ಕೆ ಗುರಿಯನ್ನು 37 ಓವರ್ ಗಳಲ್ಲಿ 96 ರನ್ ಗಳಿಗೆ ಪರಿಷ್ಕರಿಸಲಾಗಿತ್ತು. ಇದನ್ನು ಭಾರತ ತಂಡ ಇನ್ನೂ 118 ಎಸೆತಗಳು ಬಾಕಿ ಉಳಿದಿರವಂತೆ ಗೆದ್ದು ಬೀಗಿತು.
ಅಭಿಜ್ಞಾನ್ ಗೆಲುವಿನ ಬ್ಯಾಟಿಂಗ್
ಭಾರತದ ವೈಭವ್ ಸೂರ್ಯವಂಶಿ ಕೇವಲ 2 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ ಕೇವಲ 25 ರನ್ ಗೆ ಭಾರತದ ಮೂರು ವಿಕೆಟ್ ಗಳು ಉರುಳಿದ್ದವು. ಈ ಹಂತದಲ್ಲಿ ಅಭಿಜ್ಞಾನ್ ಕುಂಡು ಅವರು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು 41 ಎಸೆತಗಳನ್ನು ಎದುರಿಸಿ 5 ಬೌಂಡರಿ ಮತ್ತು 1 ಸಿಕ್ಸರ್ ಇದ್ದ ಅಜೇಯ 42 ರನ್ ಬಾರಿಸಿದರು. ಇವರೊಂದಿಗೆ ನಾಯಕ ಆಯುಷ್ ಮ್ಹಾತ್ರೆ 19, ವಿಹಾನ್ ಮಲ್ಹೋತ್ರಾ 18, ಕಾನಿಷ್ಕ್ ಚೌಹಾನ್ ಅಜೇಯ 10 ರನ್ ಗಳಿಸಿದರು. ರಿತ್ವಿತ್ ಅಪ್ಪಿದಿ 2 ವಿಕೆಟ್ ಎಗರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಅಮೆರಿಕ ತಂಡ ಭಾರತದ ಬೌಲಿಂಗ್ ದಾಳಿಯ ಮುಂದೆ ನಿರುತ್ತರವಾಯಿತು. ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ಸೂದಿನಿ(52 ಎಸೆತದಲ್ಲಿ 36) ಹೊರತುಪಡಿಸಿದರೆ ಬೇರಾರೂ ಉತ್ತಮ ಆಟ ಪ್ರದರ್ಶಿಸಲಿಲ್ಲ. ಒಂದು ತುದಿಯಲ್ಲಿ ಕ್ರೀಸಿಗಂಟಿಕೊಂಡು ಆಡುತ್ತಿದ್ದ ಅವರು ಭಾರತದ ಬೌಲರ್ ಗಳಿಗೆ ಕೊಂಚ ತಲೆನೋವಾದರು. ಈ ವೇಳೆ ಬೌಲಿಂಗ್ ಗೆ ಇಳಿದ ವೈಭವ್ ಸೂರ್ಯವಂಶಿ ಅವರು ನಿತೀಶ್ ಅನ್ನು ಖಿಲಾನ್ ಪಟೇಲ್ ಗೆ ಕ್ಯಾಚ್ ಕೊಡಿಸುವ ಮೂಲಕ ಅಮೆರಿಕದ ಇನ್ನಿಂಗ್ಸ್ ಮುಕ್ತಾಯಗೊಂಡಿತು. ಭಾರತ ತಂಡದ ಮಧ್ಯಮ ವೇಗಿ ಹೆನಿಲ್ ಪಟೇಲ್ 16 ರನ್ ಗೆ 5 ವಿಕೆಟ್ ಎಗರಿಸಿದರು. ಅರ್ಹವಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.