ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣದ ವಿರುದ್ದ ನೀಡಿದ ದೂರನ್ನು ಖಂಡಿಸಿದ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್


ಮೂಡುಬಿದಿರೆ: ಪುತ್ತೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ನೀಡಿದ ಭಾಷಣದ ಹಿನ್ನೆಲೆ ಅವರ ವಿರುದ್ಧ ದಾಖಲಾಗಿರುವ ದೂರನ್ನು ಶಾಸಕ ಉಮಾನಾಥ ಕೋಟ್ಯಾನ್ ಖಂಡಿಸಿದ್ದಾರೆ.

ಸ್ವಾಮಿ ವಿವೇಕಾನಂದರು ರಾಷ್ಟ್ರಭಕ್ತಿ, ಆತ್ಮಬಲ ಮತ್ತು ಭಾರತೀಯ ಮೌಲ್ಯಗಳ ಪ್ರತೀಕವಾಗಿದ್ದು, ಅವರ ಜಯಂತಿಯಂತಹ ಪವಿತ್ರ ವೇದಿಕೆಯಲ್ಲಿ ದೇಶ ಹಾಗೂ ಸಮಾಜದ ಹಿತದ ವಿಚಾರಗಳನ್ನು ಪ್ರಸ್ತಾಪಿಸಿರುವುದನ್ನು ದ್ವೇಷ ಭಾಷಣವೆಂದು ಬಿಂಬಿಸುವುದು ದುರುದ್ದೇಶಪೂರಿತ ರಾಜಕೀಯ ಕ್ರಮವಾಗಿದೆ ಎಂದು ಕೋಟ್ಯಾನ್ ಹೇಳಿದ್ದಾರೆ.

ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದ್ದು, ಇದರ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನ ನಡೆಯುತ್ತಿದೆ. ಹಿಂದೂ ಸಮಾಜದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನ ನೀಡಿದ ಮೂಲಭೂತ ಹಕ್ಕಾಗಿದೆ. ಆದರೆ ರಾಷ್ಟ್ರವಾದಿ ಚಿಂತನೆಗಳನ್ನು ವ್ಯಕ್ತಪಡಿಸಿದರೆ ದೂರು, ಕೇಸು ಹಾಗೂ ಬೆದರಿಕೆಗಳ ವಾತಾವರಣ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಈ ಪ್ರಕರಣವನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವುದೇ ಪಕ್ಷಪಾತವಿಲ್ಲದೆ ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕು. ಸುಳ್ಳು ಹಾಗೂ ರಾಜಕೀಯ ಪ್ರೇರಿತ ದೂರುಗಳ ಮೂಲಕ ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ಪ್ರಯತ್ನಗಳನ್ನು ಬಿಜೆಪಿ ತೀವ್ರವಾಗಿ ಎದುರಿಸಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.