ಮೂಡುಬಿದಿರೆ: ತಾಲೂಕಿನ ಹೊಸಬೆಟ್ಟು ಗ್ರಾಮದ ಕೆಂಪ್ಲಾಜೆ ಪರಿಸರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶತಮಾನಗಳ ಕಾಲದ ಇತಿಹಾಸವಿದೆ. ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ನಿಟ್ಟಿನಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯನ್ನು ಕಳೆದು ವರ್ಷದ ಜೂನ್ ತಿಂಗಳಲ್ಲಿ ನಡೆಸಲಾಗಿತ್ತು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ದೇವಸ್ಥಾನದಲ್ಲಿ ಹಲವಾರು ಬದಲಾವಣೆ ಹಾಗೂ ಅಭಿವೃದ್ದಿಯ ಕಾರ್ಯಗಳನ್ನು ನಡೆಸಲು ಚಿಂತಿಸಲಾಯಿತು.ಆ ಬಳಿಕ ಕೇವಲ ಆರು ತಿಂಗಳುಗಳ ಸಮಯದಲ್ಲಿ ಮಿಂಚಿನ ವೇಗದಲ್ಲಿ ಆಭಿವೃದ್ದಿ ಕಾರ್ಯಗಳು ನಡೆದಿದ್ದು ಸದ್ಯ ದೇವಸ್ಥಾನದ ವರ್ಷಾಂಪ್ರತಿ ವೈಭವದ ಜಾತ್ರ ಮಹೋತ್ಸವಕ್ಕೆ ಸಜ್ಜಾಗಿ ನಿಂತಿದೆ. ಈ ಎಲ್ಲಾ ಆಭಿವೃದ್ದಿ ಕಾರ್ಯಗಳ ಮುಂದಾಳತ್ವ ವಹಿಸಿದ್ದು ಒರ್ವ ಮಹಿಳೆ ಎಂಬುದು ಮತ್ತೊಂದು ವಿಶೇಷ.
ಪ್ರಶ್ನಾ ಚಿಂತನೆಯಲ್ಲಿ ಹಲವಾರು ಬದಲಾವಣೆಗಳಿಗೆ ಸೂಚನೆ:
ಜೂನ್ ತಿಂಗಳಿನಲ್ಲಿ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನದ ಹೆಸರನ್ನು ಈ ಹಿಂದೆ ಇದ್ದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಎಂದು ಮರುನಾಮಕರಣ ಮಾಡಬೇಕು ಎಂದು ಸೂಚಿಸಲಾಗಿತ್ತು. ಹಾಗೂ ಅಣ್ಣಪ್ಪ ಪಂಜುರ್ಲಿ ದೈವ ದೇವಸ್ಥಾನದ ಹೊರಗೆ ಇದ್ದು ಈ ಹಿಂದೆ ಇದ್ದಂತೆ ಅದನ್ನು ದೇವಸ್ಥಾನದ ಒಳಗೆ ಪುನರ್ ಪ್ರತಿಷ್ಠಾಪಿಸಬೇಕು ಎಂದು ತಿಳಿಸಲಾಗಿತ್ತು. ಮಾತ್ರವಲ್ಲದೆ ಈ ಹಿಂದೆ ಕಾಳಭೈರವನ ಆರಾಧನೆಯೂ ಈ ಜಾಗದಲ್ಲಿ ಇತ್ತು ಅದ್ದರಿಂದ ಅದೇ ರೀತಿ ಕಾಳಭೈರವನ ಕಟ್ಟೆಯನ್ನು ನಿರ್ಮಿಸಿ ಆರಾಧಿಸಬೇಕು ಎಂದು ತಿಳಿಸಿದ್ದರು. ದೇವಸ್ಥಾನದ ಹಿಂಬದಿಯಲ್ಲಿರುವ ಸರೋವರದ ಕಿನಾರೆಯಲ್ಲಿ ಕಾಳಭೈರವನ ಕಟ್ಟೆಯನ್ನು ಸ್ಥಾಪಿಸಲಾಗಿದ್ದು. ವಿಶೇಷವಾದ ಶಕ್ತಿಯಿಂದ ಕೂಡಿರುವ ಪಕೃತಿಯ ಅನುಭವವನ್ನು ಈ ಸ್ಥಳದಲ್ಲಿ ಪಡೆಯಬಹುದು.
6 ತಿಂಗಳುಗಳಲ್ಲಿ ಬಹುತೇಕ ಎಲ್ಲಾ ಕಾರ್ಯಗಳು ಪೂರ್ಣ:
ಪ್ರಶ್ನಾ ಚಿಂತನೆಯಲ್ಲಿ ಮೂಡಿ ಬಂದ ಪ್ರಕಾರ ಎಲ್ಲಾ ಬದಲಾವಣೆಗಳನ್ನು ಮಾಡಲಾಗಿದ್ದು, ಸದ್ಯ ಕಾಲವಾಧಿ ಜಾತ್ರೆಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಕೆಂಪ್ಲಾಜೆ ಸಿದ್ದವಾಗಿದೆ. 6 ತಿಂಗಳುಗಳ ಹಿಂದೆ ಇದ್ದ ದೇವಸ್ಥಾನಕ್ಕೂ ಇವತ್ತು ಇರುವ ದೇವಸ್ಥಾನಕ್ಕೂ ಅಜಗಜಂತರ ವ್ಯತ್ಯಾಸ ಕಾಣುತ್ತಿದ್ದು ದೇವಿ ಚಾಮುಂಡೇಶ್ವರಿ ಮತ್ತು ಅಣ್ಣಪ್ಪ ಪಂಜುರ್ಲ ಹಾಗೂ ಸಹ ಪರಿವಾರ ದೈವ ದೇವರುಗಳ ಆಶೀರ್ವಾದದಿಂದ ಈ ರೀತಿಯ ಬದಲಾವಣೆ ಕಾಣುತ್ತಿದೆ ಎಂದು ಚರ್ಚೆಯಾಗುತ್ತಿದೆ.
ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ನೇತೃತ್ವದಲ್ಲಿ ಆಭಿವೃದ್ದಿ ಕಾರ್ಯಗಳು:
ಕೆಂಪ್ಲಾಜೆ ದೇವಸ್ಥಾನದ ಉಸ್ತುವಾರಿಯನ್ನುಆಗಿನ ಕಾಲದಲ್ಲಿ ದಿ. ಡಾ ಅಮರನಾಥ್ ಶೆಟ್ಟಿಯವರ ಕೈಗೆ ಗ್ರಾಮಸ್ಥರು ಉಸ್ತುವಾರಿಯನ್ನು ನೀಡಿದ್ದರು. ಆ ಬಳಿಕ ಅದನ್ನು ಬ್ರಾಹ್ಮಣ ಕುಟುಂಬವೊಂದು ದೇವಸ್ಥಾನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಸೌಭಾಗ್ಯ ಡಾ. ಅಮರನಾಥ್ ಶೆಟ್ಟಿಯವರ ಪುತ್ರಿ ಡಾ. ಅಮರಶ್ರೀ ಅಮರನಾಥ ಶೆಟ್ಟಿಯವರ ಪಾಲಿಗೆ ಒದಗಿ ಬಂತು. ಅವರ ನೇತೃತ್ವದಲ್ಲಿಯೇ ಈ ಎಲ್ಲಾ ಆಭಿವೃದ್ದಿ ಕಾರ್ಯಗಳು ನಡೆಯುವುದರ ಜೊತೆಗೆ ಸ್ಥಳೀಯರ ಶ್ರಮದಿಂದ ದೇವಸ್ಥಾನ ಸುಂದರ ರೂಪವನ್ನು ಪಡೆಯುವಂತಾಯಿತು.
18 ರಿಂದ ಆರಂಭವಾಗಿ 20ರವರೆಗೆ ವಾರ್ಷಿಕ ಜಾತ್ರಾಮಹೋತ್ಸವ:
ಶೀ ಚಾಮುಂಡೇಶ್ವರಿ ದೇವಸ್ಥಾನ,ಕೆಂಪ್ಲಾಜೆಯ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವವು ದಿನಾಂಕ ೧೮-೦೧-೨೦೨೬ರ ಭಾನುವಾರದಿಂದ ಆರಂಭಗೊಂಡು ೨೦-೦೧-೨೦೨೬ರ ಮಂಗಳವಾರದವರೆಗೆ ವಾರ್ಷಿಕ ಜಾತ್ರಾಮಹೋತ್ಸವ ನಡೆಯಲಿದೆ. ಭಾನುವಾರ ಹಾಗೂ ಸೋಮವಾರ ಗಣಹೋಮ, ಬಲಿಸುತ್ತು, ನಿತ್ಯ ಬಲಿ, ನಾಗತಂಬಿಲ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
೨೦ರ ಮಂಗಳವಾರದಂದು ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಉತ್ಸವ ಬಲಿ, ದರ್ಶನ ಬಲಿ, ಪಂಜುರ್ಲಿ ದೈವದ ಭಂಡಾರ ಇಳಿಯುವುದು, ದೈವ-ದೇವರ ಭೇಟಿ ಹಾಗೂ ರಥೋತ್ಸವ ನಡೆಯಲಿದೆ ಹಾಗೂ ರಾತ್ರಿ ೧೦ ಘಂಟೆಗೆ ಅಣ್ಣಪ್ಪ ಪಂಜುರ್ಲಿಯ ನೇಮೋತ್ಸವವು ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೈವ-ದೇವರ ಗಂಧ ಪ್ರಸಾದ ಸ್ವೀಕರಿಸಿ, ದೈವ-ದೇವರುಗಳ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ.