ಮೂಡುಬಿದಿರೆ: ಐತಿಹಾಸಿಕ ಪ್ರಸಿದ್ಧಿಯ ನೆಲ್ಲಿತೀರ್ಥ ಗುಹಾ ಕ್ಷೇತ್ರಕ್ಕೆ ಉಡುಪಿ ಪೇಜಾವರ ಮಠಾಧೀಶ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಗುರುವಾರ ಭೇಟಿನೀಡಲಿದ್ದಾರೆ. ಬೆಳಗ್ಗೆ ೯.೩೦ರ ಸುಮಾರಿಗೆ ಶ್ರೀಗಳು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಈ ಹಿಂದೆಯೂ ನೆಲ್ಲಿತೀರ್ಥ ಗುಹಾಕ್ಷೇತ್ರಕ್ಕೆ ಪೇಜಾವರ ಶ್ರೀಗಳು ಆಗಮಿಸಿದ್ದರು. ಇದೀಗ ಈ ಬಾರಿ ಗುಹಾ ಪ್ರವೇಶ ಆರಂಭವಾದ ನಂತರ ಶ್ರೀಗಳು ಭೇಟಿ ನೀಡುತ್ತಿದ್ದಾರೆ. ಶ್ರೀಗಳ ಭೇಟಿಯ ಸಂದರ್ಭದಲ್ಲಿ ಶ್ರೀಗಳ ಶಿಷ್ಯವರ್ಗ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನೆಲ್ಲಿತೀರ್ಥ ಗುಹಾಲಯ ಐತಿಹಾಸಿಕ ಮಹತ್ವದ ಕ್ಷೇತ್ರ. ಇಲ್ಲಿ ಸೋಮನಾಥೇಶ್ವರನ ದೇಗುಲವಿದೆ. ಸಮೀಪದಲ್ಲಿಯೇ ಪುರಾತನ ಗುಹೆಯೂ ಇದೆ. ಅಪಾರ ಐತಿಹ್ಯವನ್ನು ಹೊಂದಿದ ಕ್ಷೇತ್ರ ಇದಾಗಿದ್ದು, ತನ್ನ ಕಾರಣೀಕ ಶಕ್ತಿಗಳಿಂದಾಗಿ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುತ್ತಾ ಪ್ರಸಿದ್ಧಿ ಪಡೆದಿದೆ.
ಈ ದೇವಾಲಯವು ಮಂಗಳೂರಿನಿoದ ೧೭ಕಿಲೋ ಮೀಟರ್ ದೂರದಲ್ಲಿ ಇದೆ. ಗುಹೆಯ ಒಳಗೆ ನೀರಿನ ಹನಿಗಳು ನೆಲ್ಲಿಕಾಯಿಯಂತೆ ಕೆರೆಗೆ ಬೀಳುತ್ತಿರುತ್ತದೆ. ಹೀಗಾಗಿ ಅದಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂತು. ಸೋಮನಾಥೇಶ್ವರ ದೇವಾಲಯದ ಬಲಕ್ಕೆ ನೈಸರ್ಗಿಕ ಗುಹೆ ಇದೆ. ಇದು ಸುಮಾರು೨೦೦ ಮೀಟರ್ ಉದ್ದವಿದೆ. ಒಳಗೆ ಒಂದು ಸರೋವರ ಮತ್ತು ಶಿವಲಿಂಗವಿದೆ. ದೇವಾಲಯದ ಮುಖ್ಯ ದೇವರು ಶ್ರೀ ಸೋಮನಾಥೇಶ್ವರ (ಶಿವ). ಈ ದೇವಸ್ಥಾನದಲ್ಲಿ ಮಹಾಗಣಪತಿ ದೇವರು ಮತ್ತು ಜಾಬಾಲಿ ಮಹರ್ಷಿಯು ಇಲ್ಲಿದ್ದಾರೆ. ವಾಸ್ತವವಾಗಿ,ಜಾಬಾಲಿ ಮಹರ್ಷಿಯ ಬೃಂದಾವನವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ.

0 Comments