ಮೂಡುಬಿದ್ರೆ: ಬೆದ್ರದ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕ ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿದಿರುವ ಧೀರ ಮಹಿಳೆ. 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ದ ಧೈರ್ಯದಿಂದ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ದಿಟ್ಟ ಹೆಣ್ಣು. 'ಉಳ್ಳಾಲದ ರಾಣಿ ಅಬ್ಬಕ್ಕ' ಎಂದು ನಾಮಧೇಯ ಪಡೆದಿರುವ ಇವರು ಮೂಲತಃ ಬೆದ್ರದ ಚೌಟ ಅರಮನೆಗೆ ಸಂಬಂಧಪಟ್ಟವರು ಎಂಬುದು ಗಮನಾರ್ಹ.
ರಾಣಿ ಅಬ್ಬಕ್ಕ ಪುತ್ತಿಗೆಯ ಆರಮನೆಗೆ ಸೇರಿದವಳು ಎಂದು ತಿಳಿದ ಬಳಿಕ ಆಕೆಯ ಹೆಸರಿನಲ್ಲಿ ಬೆದ್ರದಲ್ಲಿ ಅಬ್ಬಕ್ಕ ವಿಗ್ರಹ ನಿರ್ಮಿಸಲು ಹಾಗೂ ಅವಳ ಇತಿಹಾಸವನ್ನು ಪ್ರಚಾರ ಮಾಡಲು ಜವನೆರ್ ಬೆದ್ರ ಸಂಘಟನೆ 'ಅಬ್ಬಕ್ಕ ನಮ್ಮ ಮಣ್ಣಿನವಳು' ಎಂಬ ಕ್ಯಾಂಪೇನ್ ಪ್ರಾರಂಭಿಸಿತು ಹಾಗೂ ವಿಗ್ರಹ ನಿರ್ಮಿಸಲು ಮನವಿ ಶಾಸಕರಿಗೆ ಮಾಡಲಾಯಿತು. ಅಂದು ಶಾಸಕರಿದ್ದ ಉಮನಾಥ್ ಕೋಟ್ಯಾನ್ ಸಂಘಟನೆಯ ಕೋರಿಕೆಯ ಮೇರೆಗೆ 2018ರಲ್ಲಿ ಮೂಡಬಿದ್ರೆಯಲ್ಲಿ ನಡೆದ 'ಕೋಟಿ-ಚೆನ್ನಯ' ಜೋಡುಕರೆ ಕಂಬಳ ಕೂಟದಲ್ಲಿ ಅಬ್ಬಕ್ಕಳ ವರ್ಣಚಿತ್ರವನ್ನಿಟ್ಟು ಗೌರವಿಸಲಾಯಿತು. ಈ ಮೂಲಕ ಸಂಘಟನೆಯ ಬೇಡಿಕೆ ಈಡೇರುವುದರ ಜೊತೆಗೆ ಜವನೆರ್ ಬೆದ್ರ ಸಂಘಟನೆಯ ಎಲ್ಲಾ ಸದಸ್ಯರ ಮೊಗದಲ್ಲಿ ಮಂದಹಾಸದ ತೃಪ್ತ ನಗು ಬೀರಿತು.
ಆ ಬಳಿಕ 2019ರಲ್ಲಿ ಅದೇ ಸ್ಥಳದಲ್ಲಿ ವೀರ ರಾಣಿ ಅಬ್ಬಕ್ಕಳ ಬೃಹತ್ ಪುತ್ತಳಿಯನ್ನು ಶಾಸಕರ ಮುತುವರ್ಜಿಯಲ್ಲಿ ನಿರ್ಮಾಣ ಮಾಡಲಾಯಿತು. ಈ ಪುತ್ತಳಿಯನ್ನು ಸ್ಥಾಪಿಸಿದ ಒಂದು ತಿಂಗಳ ಬಳಿಕ ಜವನೆರ್ ಬೆದ್ರ ಸಂಘಟನೆಯ 'ಕ್ಲಿನ್ ಅಪ್ ಮೂಡುಬಿದ್ರೆ' ಆಭಿಯಾನದ 100ನೇ ವಾರದ ಸವಿನೆಪಿಗಾಗಿ ಬೆದ್ರದ ಚೌಟರ ಅರಮನೆಯ ಎದುರುಗಡೆ ರಾಣಿ ಅಬ್ಬಕ್ಕಳ ಕಿರು ಪುತ್ತಳಿಯನ್ನು ಜವನೆರ್ ಬೆದ್ರ ಸಂಘಟನೆಯ ನೇತೃತ್ವದಲ್ಲಿ ಹಾಗೂ ಅರಮನೆಯವರ ಸಹಕಾರದಲ್ಲಿ ನಿರ್ಮಿಸಲಾಯಿತು. ವೀರ ರಾಣಿ ಆಬ್ಬಕ್ಕಳ ಪುತ್ತಳಿಯನ್ನು ಸ್ಥಾಪಿಸುವ ಮೂಲಕ ಬೆದ್ರದ ಮಣ್ಣಿನ ಮಗಳಾದ ಆಬ್ಬಕ್ಕಳಿಗೆ ಗೌರವ ಸಲ್ಲಿಸಲಾಯಿತು.
ಇದೀಗ ಸರಿಸುಮಾರು ಐದು ವರ್ಷಗಳ ಬಳಿಕ ಅರಮನೆಯ ಎದುರುಗಡೆ ನಿರ್ಮಿಸಲಾಗಿರುವ ಕಿರು ಪುತ್ತಳಿಯ ಬದಲಾಗಿ ಮಾನವ ಗಾತ್ರದ ಅಬ್ಬಕ್ಕಳ ಪುತ್ತಳಿಯನ್ನು(ಆರು ಫೀಟ್) ಮರು ನಿರ್ಮಿಸಲು ಜವನೆರ್ ಬೆದ್ರ ಸಂಘಟನೆ ತೀರ್ಮಾನಿಸಿದ್ದು. ಈ ಬಗ್ಗೆ ಅಧಿಕೃತ ಸಭೆಯನ್ನು ಜವನೆರ್ ಬೆದ್ರ ಸಂಘಟನೆ ನಡೆಸಿದ್ದು, ಸಂಘಟನೆಯ ಅಧ್ಯಕ್ಷರು ಹಾಗೂ ಟ್ರಸ್ಟಿಗಳು ಮತ್ತು ಇತರ ಸದಸ್ಯರು ಸಭೆಯಲ್ಲಿ ಮುಕ್ತ ಮನಸ್ಸಿನಿಂದ ಬೆಂಬಲಿಸಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಅರಮನೆಯ ಕಡೆಯಿಂದ ಸಹಕಾರ ನೀಡುವುದಾಗಿ ಅರಮನೆಯ ಕುಲದೀಪ್ ಎಂ ತಿಳಿಸಿದ್ದಾರೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
0 Comments