ಬೆದ್ರದ ಕೃಷ್ಟೋತ್ಸವಕ್ಕೆ ಕ್ಷಣಗಣನೆ.! ಅಧುನಿಕ ಶಿಕ್ಷಣದ ರೂವಾರಿ ಆಳ್ವಾಸ್ ಪ್ರತಿಷ್ಠಾನದ ಡಾ. ಎಂ ಮೋಹನ್ ಆಳ್ವರಿಗೆ 'ಕೃಷ್ಣೋತ್ಸವ-2025' ಪ್ರಶಸ್ತಿ

ಮೂಡಬಿದ್ರೆ: ಬೆದ್ರದ ಇತಿಹಾಸ ಪ್ರಸಿದ್ದ ಗೋಪಾಲಕೃಷ್ಣ ದೇವಸ್ಥಾನದ ವೈಭವದ ೧೦೯ನೇ ವರ್ಷದ ಮೊಸರು ಕುಡಿಕೆ ಉತ್ಸವ ಇದೇ ಬರುವ 16ರ ಶನಿವಾರದಂದು ನಡೆಯಲಿದೆ. ಈ ನಿಟ್ಟಿನಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ) ನೇತೃತ್ವದಲ್ಲಿ ನಡೆಯುವ 'ಕೃಷ್ಣೋತ್ಸವ-೨೦೨೫' ಕಾರ್ಯಕ್ರಮದ ಬಗ್ಗೆ ಸಂಘಟನೆಯ ಸ್ಥಾಪಕರಾದ ಅಮರ್ ಕೋಟೆ ಮೂಡಬಿದ್ರೆಯ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ದಿನಾಂಕ 12-08-2025ರ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವಕ್ಕೆ ೧೦೯ ವರ್ಷಗಳ ಇತಿಹಾಸವಿದ್ದು, ಹಿಂದಿನ ಕಾಲದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡದ ಈ ಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದ ಉತ್ಸವ ಇದಾಗಿತ್ತು. ಈ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ 'ಕೃಷ್ಣೋತ್ಸವ' ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಈ ಬಾರಿಯ 'ಕೃಷ್ಣೋತ್ಸವ-೨೦೨೫' ರ ಕಾರ್ಯಕ್ರಮಗಳು ಪ್ರತಿವರ್ಷದಂತೆ ಅಮರನಾಥ್ ಶೆಟ್ಟಿ ವೃತ್ತದ ಬಳಿ ನಿರ್ಮಿಸಿರುವ 'ವೇಣೂರು ಕೃಷ್ಣಯ್ಯ' ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. 'ವೇಣೂರು ಕೃಷ್ಣಯ್ಯ'ನವರು ಬೆದ್ರ ಮೊಸರು ಕುಡಿಕೆಯ ಕತೃ, ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಮ್ಮ ವೇದಿಕೆಗೆ 'ವೇಣೂರು ಕೃಷ್ಣಯ್ಯ' ಎಂಬ ಹೆಸರಿಡಲಾಗಿದೆ ಎಂದರು.

'ಕೃಷ್ಣೋತ್ಸವ-೨೦೨೫'ರಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ವಿಶೇಷವಾಗಿ ಮಂಗಳೂರಿನ ಜರ್ನಿ ಥೀಯೆಟರ್ ಗ್ರೂಪ್ ನ ಮೇಘಾನ ಕುಂದಾಪುರ ಸಾರಥ್ಯದಲ್ಲಿ ರಂಗಸಂಗೀತ ಹಾಗೂ ಜನಪದ ಗೀತೆಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ತಂಡ ದೇಶ-ವಿದೇಶಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ದೊಡ್ಡ ಮಟ್ಟದ ಜನಮನ್ನಣೆ ಗಳಿಸಿದ್ದು, ಮೂಡಬಿದ್ರೆ ಪರಿಸರದ ಜನತೆ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಪ್ರತಿಯೊಬ್ಬರು ಆಗಮಿಸಬೇಕು. ಈ ಭಾಗದಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು. 

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಭಾಗವಹಿಸುವಿಕೆಯಲ್ಲಿ 'ಚಂದ್ರಮೌಳಿ ವಿಲಾಸ' ಎಂಬ ಹಾಸ್ಯಮಯ ಯಕ್ಷಗಾನ ಪ್ರಸಂಗವೂ ಮೂಡಿ ಬರಲಿದೆ. 

ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿಯಿಂದ ಚಾಲನೆ:

ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಿಗ್ ಬಾಸ್ ವಿಜೇತ ಸ್ಪರ್ಧಿ ಹಾಗೂ ಕನ್ನಡದ ನಟ ಶೈನ್ ಶೆಟ್ಟಿ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಸರಿಯಾಗಿ ಸಂಜೆ 3 ಗಂಟೆಗೆ ಚಾಲನೆ ನೀಡಲಿದ್ದಾರೆ ಆ ಬಳಿಕ ಜರ್ನಿ ಥೀಯೆಟರ್ ಗ್ರೂಪ್ ನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಡಾ. ಎಂ ಮೋಹನ್ ಆಳ್ವರಿಗೆ ಈ ಬಾರಿಯ 'ಕೃಷ್ಣೋತ್ಸವ' ಪ್ರಶಸ್ತಿ ಪ್ರಧಾನ ಹಾಗೂ ಐವರಿಗೆ ಗೌರವ ಸನ್ಮಾನ:

ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದರು ಹಾಗೂ ರಾಜ್ಯ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೃಷ್ಣ ಜೆ ಪಾಲೇಮಾರ್, ಮೂಡಬಿದ್ರೆಯ ಶಾಸಕರಾದ  ಉಮಾನಾಥ್ ಕೋಟ್ಯಾನ್, ಡಾ. ಎಂ ಮೋಹನ್ ಆಳ್ವ, ಮಿಥುನ್ ರೈ, ಶ್ರೀ ಕುಲ ದೀಪ್ ಎಂ ಹಾಗೂ ಇನ್ನಿತರ ಗಣ್ಯರು ಭಾಗಿಯಾಗಲಿದ್ದು, ಕೃಷ್ಣ ಜೆ ಪಾಲೇಮಾರ್ ಈ ಸಭಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಅಧುನಿಕ ಶಿಕ್ಷಣದ ರೂವಾರಿ, ವಿಶ್ವವೇ ಮೂಡಬಿದ್ರೆಯ ಕಡೆಗೆ ನೋಡುವಂತೆ ಮಾಡಿದ ಶಿಕ್ಷಣ ತಜ್ಞ ಡಾ. ಎಂ ಮೋಹಳ್ ಆಳ್ವ'ರಿಗೆ 2025ರ ಸಾಲಿನ 'ಕೃಷ್ಣೋತ್ಸವ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು. ಈ ಬಾರಿ ಹೊಸದಾಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜಿಸಿದ್ದು ಇನ್ನೂ ಮುಂದೆ ಪ್ರತಿ ವರ್ಷ ಇತರ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದರು. ಇದರ ಜೊತೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಿನ್ನಿಸ್ ರೆಕಾರ್ಡ್ ದಾಖಲಿಸಿದ ಗಾಯಕ ಹಾಗೂ ಸಂಗೀತ ನಿರ್ದೇಶಕ ಯಶವಂತ ಎಂ.ಜಿ, ದೀಕ್ಷಿತ್ ಕೆ ಅಂಡಿಂಜೆ ಹಾಗೂ ಯುವಾ ಶೆಟ್ಟಿ ಸೇರಿದಂತೆ ಈ ನಾಲ್ವರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು. ಇದರ ಜೊತೆಗೆ ವಿಶೇಷವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು ಅವುಗಳು ಈಗಾಗಲೇ ಯಶಸ್ವಿಯಾಗಿ ನಡೆದಿದ್ದು ಅವುಗಳ ಬಹುಮಾನ ವಿತರಣ ಕಾರ್ಯಕ್ರಮವೂ ಇದೇ ಸಂಧರ್ಭದಲ್ಲಿ ನಡೆಯಲಿದೆ ಎಂದರು. 

ಮೂಡಬಿದ್ರೆಯ ಪರಿಸರದಲ್ಲಿ ನಡೆಯುವ ಅತೀ ಪುರಾತನವಾದ ಮೊಸರು ಕುಡಿಕೆ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಪ್ರತಿಯೊಬ್ಬರು ಆಗಮಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು. ಮಾತ್ರವಲ್ಲದೆ ಆಗಸ್ಟ್ 15ರಂದು ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆಯೂ ನಡೆಯಲಿದ್ದು ಪ್ರತಿಯೊಬ್ಬರು ಮೂಡಬಿದ್ರೆಯ ಅತೀ ಪುರತಾನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು. 


Post a Comment

0 Comments