ಮೂಡಬಿದ್ರೆ: ಬೆದ್ರದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ 109ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಇತಿಹಾಸ ಪ್ರಸಿದ್ದವಾಗಿರುವ ಮೂಡಬಿದ್ರೆಯ ಈ 'ಮೊಸರು ಕುಡಿಕೆ' ಉತ್ಸವ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನ. ಈ ಮೊಸರು ಕುಡಿಕೆ ಉತ್ಸವಕ್ಕೆ ತನ್ನದೇ ಅದ ಒಂದು ಇತಿಹಾಸವಿದೆ. ಅತ್ಯಂತ ಪುರಾತನ 'ಮೊಸರು ಕುಡಿಕೆ' ಉತ್ಸವಗಳಲ್ಲಿ ಒಂದಾಗಿರುವ ಮೂಡಬಿದ್ರೆಯ ಈ ಉತ್ಸವದ ಹಿನ್ನಲೆ ಹಾಗೂ ಆರಂಭದ ದಿನಗಳ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಜೀರ್ಣೋದ್ದಾರ:
ಅದು 1912ನೇ ಸಮಯ ಒಂದು ರೀತಿಯಲ್ಲಿ ಕಷ್ಟದ ದಿನಗಳು ಎಂದರೆ ತಪ್ಪಾಗಲಾರದು ಅದರೂ ಆ ದಿನಗಳಲ್ಲಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸ್ಥಿತಿವಂತರಾಗಿದ್ದ ವೇಣೂರು ಕೃಷ್ಣಯ್ಯ ಎಂಬ ಆಸ್ತಿಕರೊಬ್ಬರು ಮೂಡಬಿದ್ರೆಗೆ ಬರುತ್ತಾರೆ. ಮೂಡಬಿದ್ರೆಯ ಸುಂದರ ಪರಿಸರದಲ್ಲಿ ತೀರ್ಥಯಾತ್ರಿಗಳಿಗೆ ಆನ್ನ ದಾನದ ವ್ಯವಸ್ಥೆಯನ್ನು ಮಾಡುವ ಉದ್ದೇಶದಿಂದ ಆನ್ನ ಛತ್ರವನ್ನು ನಿರ್ಮಾಣ ಮಾಡುತ್ತಾರೆ. ಜನರು ಈ ಛತ್ರದಲ್ಲಿ ಬಂದು ವಿಶ್ರಾಂತಿ ಪಡೆದು ಆನ್ನ ಪ್ರಸಾದವನ್ನು ಸ್ವೀಕರಿಸಿ ತಮ್ಮ ಯಾತ್ರೆಯನ್ನು ಮುಂದುವರಿಸುತ್ತಿದ್ದರು. ಈ ಸಂಧರ್ಭದಲ್ಲಿ ವೇಣೂರು ಕೃಷ್ಣಯ್ಯ ಶಿಥಿಲಾವಸ್ಥೆಯಲ್ಲಿದ್ದ ಆ ಒಂದು ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ಪುಣ್ಯ ಕಾರ್ಯಕ್ಕೆ ಕೈ ಹಾಕುತ್ತಾರೆ. ತಮ್ಮ ಮುಂದಾಳತ್ವದಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುತ್ತಾರೆ. ವೇಣೂರು ಕೃಷ್ಣಯ್ಯನವರ ನೇತೃತ್ವದಲ್ಲಿ ಆಭಿವೃದ್ದಿಗೊಂಡ ಆ ದೇವಸ್ಥಾನವೇ ಮೂಡಬಿದ್ರೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ.
ಮೂಡಬಿದ್ರೆಯಲ್ಲಿಯೇ ವಾಸ; ಮೊಸರು ಕುಡಿಕೆ ಉತ್ಸವ ಆರಂಭ:
ವೇಣೂರು ಕೃಷ್ಣಯ್ಯನವರು ವೇಣೂರಿನ ಪರಿಸರದವಾರದರು ಮೂಡಬಿದ್ರೆಗೆ ಬಂದು ಧರ್ಮ ಕಾರ್ಯಗಳನ್ನು ಮಾಡುತ್ತಾರೆ. ದೇವಸ್ಥಾನವನ್ನು ಜೇರ್ಣೋದ್ದಾರ ಮಾಡುವ ಸಂಧರ್ಭದಲ್ಲಿ ದೇವಸ್ಥಾನದ ಪಕ್ಕದಲ್ಲಿಯೇ ಮನೆ ಮಾಡಿ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆದುಕೊಂಡು ಹೋಗುವಂತಾಗಲೂ ಇಲ್ಲಿಯೇ ಬಂದು ನೆಲೆಸುತ್ತಾರೆ. ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳು ಮುಗಿದ ಬಳಿಕ ಗೋಪಾಲ ಕೃಷ್ಣ ದೇವಸ್ಥಾನದ ಹೆಸರಿನಲ್ಲಿ ವಿಶೇಷ ಆಚರಣೆಯೊಂದನ್ನು ಆರಂಭ ಮಾಡುತ್ತಾರೆ. ಕೃಷ್ಣಯ್ಯನವರು ಆರಂಭಿಸಿದ ಆ ಉತ್ಸವವೇ ಭಗವಾನ್ ಕೃಷ್ಣನ ಜನ್ಮದಿನವಾದ 'ಕೃಷ್ಣ ಜನ್ಮಾಷ್ಟಮಿ'ಯ ಮರುದಿನ ನಡೆಯುವ ಮೊಸರು ಕುಡಿಕೆ ಉತ್ಸವ.
| 1980ರಲ್ಲಿ ಬೆದ್ರ ಮೊಸರು ಕುಡಿಕೆಗೆ ಸೇರಿದ ಜನಸ್ತೋಮ |
ವೇಣೂರು ಕೃಷ್ಣಯ್ಯ ಒರ್ವ ಕಲಾಪೋಷಕರಾಗಿದ್ದರು, ಸ್ವತಃ ತಾವೇ ಯಕ್ಷಗಾನ ಪ್ರೇಮಿಯಾಗಿದ್ದುದರಿಂದ ಯಕ್ಷಗಾನ ಕಲಾವಿದರಿಗೆ ಹೆಚ್ಚಿನ ಬೆಂಬಲ ನೀಡುವ ಉದ್ದೇಶದಿಂದ ಈ ಮೊಸರು ಕುಡಿಕೆ ಉತ್ಸವದಲ್ಲಿ ವೇಷಧಾರಿಗಳಾಗಲು ಯಕ್ಷಗಾನ ಕಲಾವಿದರಿಗೆ ಅವಕಾಶ ನೀಡಿದರು. ಯಕ್ಷಗಾನದ ಪೋಷಕರು ಅಲ್ಲದೇ ಗೋಪಾಲಕೃಷ್ಣ ದೇವರ ಮೇಳವನ್ನು ಪ್ರಾರಂಭಿಸಿ ಮುನ್ನಡೆಸುತ್ತಾರೆ. ವೇಣೂರು ಕೃಷ್ಣಯ್ಯನವರು ಆರಂಭಿಸಿದ ಮೊಸರು ಕುಡಿಕೆ ಉತ್ಸವದ ಕಲ್ಪನೆ ಅತ್ಯಂತ ವಿಶಿಷ್ಟವಾಗಿತ್ತು. 'ಕೃಷ್ಣ ಜನ್ಮಾಷ್ಟಮಿ'ಯ ದಿನದಂದು ಕೃಷ್ಣ ಹಾಗೂ ಯಶೋಧೆಯ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಧಿ ವಿಧಾನಗಳ ಪ್ರಕಾರ ಪೂಜಾ ಕೈಂಕರ್ಯಗಳನ್ನು ನೆರವೆರಿಸಿ 'ಜನ್ಮಾಷ್ಟಮಿ'ಯ ಉತ್ತರದಲ್ಲಿ ಮಧ್ಯಾಹ್ಮದ ಪೂಜೆಯ ಬಳಿಕ ಕೃಷ್ಣ ಹಾಗೂ ಯಶೋಧಳ ಮೂರ್ತಿಯ ಜೊತೆಗೆ ಕೃಷ್ಣ, ಬಲಭದ್ರ ಹಾಗೂ ಸುಭದ್ರೆಯ ವೇಷಧಾರಿಗಳು ಮೂಡಬಿದ್ರೆಯ ಪೇಟೆಗೆ ಬಂದು ಅಲ್ಲಿ ನೇತು ಹಾಕಿದ್ದ ಮಡಿಕೆಗಳನ್ನು ಹೊಡೆಯುತ್ತಾ ಪೇಟೆ ಪೂರ್ತಿ ಸಂಚಾರಿಸಿ ಮತ್ತೇ ದೇವಸ್ಥಾನದ ಕಡೆಗೆ ಪ್ರಯಾಣ ಬೆಳೆಸುವ ವಿಶೇಷ ಉತ್ಸವವನ್ನು ಆರಂಭಿಸಿದರು.
ಈ ಉತ್ಸವದಲ್ಲಿ ಮೂರ್ತಿ ಹಾಗೂ ವೇಷಧಾರಿಗಳ ಜೊತೆಗೆ ಹುಲಿ ವೇಷ, ತಾಳ ಮದ್ದಳೆಯ ಜೊತೆಗೆ ಇತರ ವೇಷಗಳು ಜೊತೆ ಸಾಗುತ್ತಿದ್ದವು. ಹಳ್ಳಿ ಹಳ್ಳಿಗಳಿಂದ ಜನರು ಬಂದು ಸೇರುತ್ತಿದ್ದರು ಹಾಗೂ ವೈಭವದ ಮೊಸರು ಕುಡಿಕೆ ಉತ್ಸವದ ವೈಭೋಗವನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದರು.
ವೇಣೂರು ಕೃಷ್ಣಯ್ಯನವರು ಇತರ ದಿನಗಳಲ್ಲಿಯೂ ದೇವಸ್ಥಾನದಲ್ಲಿ ತಾಳಮದ್ದಲೆ, ಸಂಗೀತ, ಹರಿಕಥೆ ಮುಂತಾದ ಮನರಂಜನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಮನರಂಜನೆ ಎಂದೆರೇನು ಏನ್ನುವ ಕಾಲದಲ್ಲಿ ಮೊಸರು ಕುಡಿಕೆಯಂತಹ ಧಾರ್ಮಿಕ ಕಾರ್ಯದಲ್ಲಿ ನೂರಾರು ಮನರಂಜನ ಕಾರ್ಯಕ್ರಮಗಳನ್ನು ನಡೆಸಿದ ಕೀರ್ತಿ ವೇಣೂರು ಕೃಷ್ಣಯ್ಯನವರಿಗೆ ಸಲ್ಲಬೇಕು.
ವೇಣೂರು ಕೃಷ್ಣಯ್ಯವನರು ಅಂದು ಭಿತ್ತಿದ ಬೀಜ ಇಂದು ಬೃಹತ್ ಮರವಾಗಿ ಬೆಳೆದು ಇಂದು 109ನೇ ವರ್ಷದ ಸಂಭ್ರಮದ ಮೊಸರು ಕುಡಿಕೆ ಉತ್ಸವವನ್ನು ಆಚರಿಸಲಿದೆ. ಮೂಡಬಿದ್ರೆ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವ ಜಿಲ್ಲೆಯ ಅತ್ಯಂತ ದೊಡ್ಡ ಮೊಸರು ಕುಡಿಕೆ ಉತ್ಸವಗಳಲ್ಲಿ ಒಂದು. ಈ ಮೊಸರು ಕುಡಿಕೆ ಉತ್ಸವದ ಆರಂಭ ಹಾಗೂ ಹಿನ್ನಲೆಯನ್ನು ಈ ಅಂಕಣದಲ್ಲಿ ಕಂಡಿರಿ ಇನ್ನೂ ಹೆಚ್ಚಿನ ಅಂಕಣಗಳು ಮುಂದಿನ ದಿನಗಳಲ್ಲಿ ಬರಲಿದ್ದು ಅದಕ್ಕಾಗಿ 'ಕದಂಬ ಮೀಡಿಯಾ' WhatsApp ಗುಂಪಿಗೆ ಕೂಡಲೇ ಸೇರಿ. ಆ ಮತ್ತೊಂದು ಮಾತು ಮರೆಯದಿರಿ ಮೂಡಬಿದ್ರೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ೧೦೯ನೇ ವರ್ಷದ ವೈಭವದ ಮೊಸರು ಕುಡಿಕೆ ಇದೇ ಆಗಸ್ಟ್ 16ನೇ ತಾರೀಖಿಗೆ ನಡೆಯಲಿದೆ ತಪ್ಪದೇ ಬನ್ನಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ.
0 Comments