ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಂಡಿರುವ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಂಪೂರ್ಣ ನೋಟ

ಮೂಡಬಿದ್ರೆ: ಪುತ್ತಿಗೆ ಮಹಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನವು 800 ವರ್ಷಗಳ ಪುರಾತನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಶ್ರೀ ಸೋಮನಾಥೇಶ್ವರ ದೇವಸ್ಥಾನವು ಸಮಗ್ರ ಪುನರ್ ನಿರ್ಮಾಣದ ನಂತರ ಬ್ರಹ್ಮಕಲಶಾಭಿಷೇಕಕ್ಕೆ ಸಿದ್ಧವಾಗಿದೆ. ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪುನರ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, ಶ್ರೀ ಸೋಮನಾಥೇಶ್ವರನ ದಿವ್ಯ ಸನ್ನಿಧಾನದಲ್ಲಿ ಇದೇ ಬರುವ ಫೆಬ್ರವರಿ 28 ರಿಂದ ಮಾರ್ಚ್ 7 ರವರೆಗೆ ಬ್ರಹ್ಮಕಲಶಾಭಿಷೇಕ ಮತ್ತು ಪುನಃ ಪ್ರತಿಷ್ಠಾಪನಾ ವಿಧಿಗಳನ್ನು ಆಯೋಜಿಸಲಾಗಿದೆ.

ಚೌಟ ರಾಜವಂಶಸ್ಥರ ಅರಮನೆಯ ಹಿನ್ನಲೆ:

ಚೌಟ ರಾಜವಂಶಸ್ಥರು ಉಳ್ಳಾಲದ ಸೋಮೆಶ್ವರದ ಸೋಮನಾಥನ ಆರಾಧಕರು. ವರದಾಯ ದೇವರಾಜ ಚೌಟರ ನೇತೃತ್ವದಲ್ಲಿ ಪುತ್ತಿಗೆ(ಕಾಯರ್ ಮಂಜ್)ಯಲ್ಲಿ ಆಡಳಿತವನ್ನು ಸ್ಥಾಪಿಸಿದರು ಜೊತೆಗೆ ಅಲ್ಲಿಯೇ ಅರಮನೆಯನ್ನು ಕೂಡ ನಿರ್ಮಾಣ ಮಾಡಿದರು ತಮ್ಮ ಪರಂಪರೆಯಂತೆ ದಿನನಿತ್ಯದ ಪೂಜೆಯ ಮುನ್ನ ಉಳ್ಳಾಲ ಸೋಮೆಶ್ವರದ ಸೋಮನಾಥನ ಸನ್ನಿಧಾನದಿಂದ ಪ್ರಸಾದ ಬರುವ ಸಂಪ್ರದಾಯವಿತ್ತು. ದೂರದ ಸ್ಥಳದಿಂದ ಪ್ರಸಾದವನ್ನು ತರಲು ಕಷ್ಟವಾಗುತ್ತಿದ್ದುದರಿಂದ, ಎರಡನೇ ತಿರುಮಲರಾಯ ಪುತ್ತಿಗೆಯಲ್ಲಿಯೇ ಸೋಮನಾಥೇಶ್ವರ ದೇವಸ್ಥಾನವನ್ನು ನಿರ್ಮಿಸಿದರು. ಕಾಲಕ್ರಮೇಣ ಚೌಟ ರಾಜರು ತಮ್ಮ ಆಡಳಿತ ಕೇಂದ್ರವನ್ನು ಮೂಡಬಿದ್ರೆಗೆ ಸ್ಥಳಾಂತರಿಸಿದರು ಹಾಗೂ ಹೊಸ ಅರಮನೆಯನ್ನು ನಿರ್ಮಾಣ ಮಾಡಿದರು ಇದು ಹೊಸ ಹಾಗೂ ಮಹತ್ತರ ಐತಿಹಾಸಿಕ ಬದಲಾವಣೆಯನ್ನು ಸೂಚಿಸುತ್ತದೆ. 

ದೇವಾಲಯದ ವ್ಯಾಪ್ತಿ ಸುಮಾರು 18 ಮಾಗಣೆ ಹಾಗೂ 77 ಗ್ರಾಮಗಳು:
ಚೌಟ ವಂಶಸ್ಥರಾದ ಕುಲದೀಪ್ ಎಂ  ಪ್ರಕಾರ ಸೋಮನಾಥೇಶ್ವರ ದೇವಾಲಯವೂ ಸುಮಾರು 18 ಮಾಗಣೆ ಹಾಗೂ 77 ಗ್ರಾಮಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದ್ದು ಇವುಗಳಲ್ಲಿ ಮಲಾಲಿ-ಪೊಳಲಿ, ಪೇಜಾವರ, ತಲಪಾಡಿ, ಉಳ್ಳಾಲ, ಸೋಮೇಶ್ವರ, ಅಮ್ಮೆಂಬಳ, ಬೆಲ್ಮ, ಕೈರಂಗಳ, ಬಾಳೆಪುಣಿ, ಮುಂಡ್ಕೂರು ಮುಂತಾದವುಗಳು ಸೇರಿವೆ. ಪ್ರಧಾನ ದೇವತೆಯಾದ ಮಹೀಷಮರ್ಧಿನಿಯೊಂದಿಗೆ ಸೋಮನಾಥೇಶ್ವರನು ನೆಲೆಸಿದ್ದಾನೆ. ದೇವಾಲಯ ಸಂಕೀರ್ಣದಲ್ಲಿ ಲಕ್ಷ್ಮಿ ನರಸಿಂಹ, ಚಂದ್ರನಾಥೇಶ್ವರ, ಪಂಚಧೂಮಾವತಿ ದೈವ, ಕರಿಯ ಮಳ ದೈವ, ರಕ್ತೇಶ್ವರಿ ದೈವ ಹಾಗೂ ದೇವರುಗಳು ಇಲ್ಲಿ ನೆಲೆಸಿದ್ದಾರೆ ಎಂದು ಅವರು ತಿಳಿಸಿದರು.

ಚೌಟ ವಂಶಸ್ಥರ ಪ್ರಮುಖರು:
ಚೌಟ ವಂಶವು 12ನೇ ಶತಮಾನದ ಕೊನೆಯಿಂದ 18ನೇ ಶತಮಾನದವರೆಗೆ ಕರಾವಳಿ ಕರ್ನಾಟಕದ ಕೆಲವು ಭಾಗಗಳನ್ನು ಆಳಿದ ಪ್ರಮುಖ ವಂಶಸ್ಥರಲ್ಲಿ ಅಗ್ರಗಣ್ಯರು. ಈ ವಂಶದ ಆಡಳಿತ ಚೆನ್ನಪ್ಪ ಚೌಟರಿಂದ ಆರಂಭವಾಗಿ, ತಿರುಮಲರಾಯ ಚೌಟ I (13ನೇ ಶತಮಾನ), ದೇವರಾಯ ಚೌಟ (14ನೇ ಶತಮಾನ) ಮುಂತಾದ ಪ್ರಮುಖ ಆಡಳಿತಗಾರರನ್ನು ಒಳಗೊಂಡಿತ್ತು. 15ನೇ ಶತಮಾನದಲ್ಲಿ ಭೈರವರಾಸ ಚೌಟ ರಾಜ್ಯದ ಪ್ರಭಾವವನ್ನು ವಿಸ್ತರಿಸಿದರು, ತಿರುಮಲರಾಯ ಚೌಟ II 16ನೇ ಶತಮಾನದಲ್ಲಿ ಪ್ರಮುಖ ಪಾತ್ರವಹಿಸಿದರು. 16ನೇ ಶತಮಾನದ ಕೊನೆ ಮತ್ತು 17ನೇ ಶತಮಾನದ ಆರಂಭದಲ್ಲಿ ವೆಂಕಟಪ್ಪ ಚೌಟ ಮತ್ತು ರಾಜ ರಾಮಚಂದ್ರ ಚೌಟ ರಾಜಕೀಯ ಅಶಾಂತಿಗಳನ್ನು ಮತ್ತು ಬಾಹ್ಯ ಬೆದರಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ಚೌಟ ವಂಶವು ಪಾಂಡುರಂಗ ಚೌಟ ಮತ್ತು ಇತರ ಆಡಳಿತಗಾರರ ಮೂಲಕ ಬ್ರಿಟಿಷ್ ಕಾಲದವರೆಗೆ ಆಡಳಿತ ಮತ್ತು ಸೈನಿಕ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸಿತು. 18ನೇ ಶತಮಾನದಲ್ಲಿ, ಕೊನೆಯ ಪ್ರಮುಖ ಆಡಳಿತಗಾರರಾದ ರಾಮಚಂದ್ರ ಚೌಟ II, ಹೈದರ್ ಅಲಿ ಮತ್ತು ನಂತರ ಬ್ರಿಟಿಷರ ಪ್ರಭಾವದಿಂದ ರಾಜ್ಯ ಕುಸಿತವನ್ನು ಕಂಡಿತು. ರಾಜಕೀಯ ನಿಯಂತ್ರಣ ಕಡಿಮೆಯಾಗಿದ್ದರೂ, ಚೌಟ ವಂಶದವರು ತಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಸದಾ ಮುಂದುವರಿಸಿದರು. "೧೬ನೇ ಶತಮಾನದಲ್ಲಿ ಪೋರ್ಚುಗೀಸರೊಂದಿಗೆ ಹೋರಾಡಿದ ವೀರ ರಾಣಿ ಅಬ್ಬಕ್ಕ ಈ ಮನೆತನಕ್ಕೆ ಸೇರಿದರೆಂಬುದು ವಿಶೇಷ".

ಪುತ್ತೆ ಉತ್ಸವ:
ಸೋಮನಾಥೇಶ್ವರನ ಈ ದೇವಸ್ಥಾನವು ಮೂರು ಪ್ರಮುಖ ಅವರಣಗಳನ್ನು ಒಳಗೊಂಡಿದ್ದು ವಿಶಾಲವಾದ ಹೊರ ಅವರಣವನ್ನು ಒಳಗೊಂಡಿದೆ ಇದು ದಕ್ಷಿಣ ಕನ್ನಡದಲ್ಲಿರುವ ಇತರ ದೇವಸ್ಥಾನಗಳಿಗಿಂತ ಭಿನ್ನ ಹಾಗೂ ವಿಶಿಷ್ಟವಾಗಿದೆ. ಮೇಷ ಸಂಕ್ರಮಣದಿಂದ ಆರಂಭವಾಗಿ ಸುಮಾರು 15 ದಿನಗಳ ಕಾಲ ನಡೆಯುವ ಪುತ್ತೆ ಉತ್ಸವವು ಅತ್ಯಂತ ವಿಜೃಂಭನೆಯಿಂದ ನಡೆಯುತ್ತದೆ. ಈ ಉತ್ಸವವು  ಪುರಾತನ ಪರಂಪರೆ  ಸಂಸ್ಕೃತಿಯನ್ನು ಪುನರ್ ನೆನಪಿಸುತ್ತದೆ. ಈ ಉತ್ಸವದಲ್ಲಿ ಜೋಡು ಬಲಿ ವಿಗ್ರಹ ಸಮರ್ಪಣೆ, ಆಳು ಪಲ್ಲಕ್ಕಿ ಉತ್ಸವ, ಬಾಕಿಮಾರು ಗದ್ದೆಯಲ್ಲಿ ಅದ್ದೂರಿ ರಥೋತ್ಸವ ಮತ್ತು ಅಂತಿಮವಾಗಿ ಉಮೆ ಗುಂಡಿಯಲ್ಲಿ ಅವಭೃಥ ಕಾರ್ಯ ನಡೆದು ಈ ಉತ್ಸವ ಸಂಪನ್ನಗೊಳ್ಳುತ್ತದೆ.

ಪುನರ್ ನಿರ್ಮಾಣ ಕಾರ್ಯ ಮತ್ತು ಬ್ರಹ್ಮಕಲಶೋತ್ಸವ:
ಸೋಮನಾಥೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವದ ಈ ಪುಣ್ತ ಕಾರ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರ ಭವ್ಯ ಅಧ್ಯಕ್ಷತೆಯ ಜೊತೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು ಅದ ಕ್ಯಾ. ಬ್ರಿಜೇಶ್ ಚೌಟ, ಮೂಡಬಿದ್ರೆ ವಿಧಾಸಭಾ ಕ್ಷೇತ್ರದ ಶಾಸಕರು ಶ್ರೀ ಉಮನಾಥ ಕೋಟ್ಯಾನ್ ಹಾಗೂ ಮಾಜಿ ಸಚಿವರಾದ ಕೆ. ಆಭಯಚಂದ್ರ ಜೈನ್ (ಗೌರವಧ್ಯಕ್ಷರು) ಇವರುಗಳ ನೇತೃತ್ವದಲ್ಲಿ ಪುನರ್ ನಿರ್ಮಾಣ ಕಾರ್ಯ ಮತ್ತು ಬ್ರಹ್ಮಕಲಶೋತ್ಸವದ ಕೆಲಸ ಕಾರ್ಯಗಳು ನಡೆಯುತ್ತಿದೆ ಹಾಗೂ ನಡೆಯಲಿವೆ.
ಚೌಟ ವಂಶಸ್ಥರಾದ ಕುಲದೀಪ್ ಎಂ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು ಅವಧಾನಿ ಗುಂಡಿಬೈಲು ಸುಬ್ರಮಣ್ಯ ಭಟ್ ಈ ದೇವಸ್ಥಾನದ ವಾಸ್ತುಶಿಲ್ಪದ ರೂವಾರಿ. ಕಲ್ಲಿನಿಂದ ನಿರ್ಮಾಣಗೊಂಡಿರುವ ಶ್ರೀ ಸೋಮನಾಥೇಶ್ವರ ದೇವಲಾಯದಲ್ಲಿ ದೇವಿ ಮಹಿಷಮರ್ಧಿನಿಗೆ ಪ್ರತ್ಯೇಕವಾದ ಗರ್ಭಗುಡಿಯನ್ನು ಅದೇ ಹಂತದಲ್ಲಿ ನಿರ್ಮಿಸಲಾಗಿದೆ. ಮಾತ್ರವಲ್ಲದೆ ತಾಮ್ರ ಲೇಪಿತ ಮೊದಲ ಪೌಲಿ, ಎರಡನೇ ಪೌಲಿ, ತೀರ್ಥ ಮಂಟಪ, ಪೂರ್ವ ಹಾಗೂ ಪಶ್ಚಿಮಕ್ಕೆ ವಿಶಾಲವಾದ ಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಕಲ್ಲು ಹಾಗೂ ಮರವನ್ನು ಬಳಸಿ ನಿರ್ಮಿಸಿರುವ ಅಗ್ರಸಭಾ ಮಂಟಪ ಇಲ್ಲಿನ ಮತ್ತೊಂದು ವಿಶೇಷ. ಉತ್ತರಭಿಮುಖವಾಗಿ ಸುಮಾರು 20 ಅಡಿ ಅಗಲವಾಗಿರುವಂತಹ ಧ್ವಜಸ್ಥಂಭವನ್ನು ನಿರ್ಮಾಣ ಮಾಡಲಾಗಿದೆ. 

ಪುನರ್ ನಿರ್ಮಾಣ ಕಾರ್ಯದಲ್ಲಿ ಕಲ್ಲಿನ ಕೆತ್ತನೆಯ ಕೆಲಸವನ್ನು ಎಲ್ಲೂರಿನ ವಿಷ್ಣುಮೂರ್ತಿ ಭಟ್ ನಿರ್ವಹಿಸಿದರೆ ಸಂಪಿಗೆ ನಾರಯಣ ಆಚಾರ್ಯ ಮರದ ಕೆತ್ತನೆಯ ಕೆಲವನ್ನು ಬಹಳ ಸುಂದರ ಹಾಗೂ ವಿಶಿಷ್ಟವಾಗಿ ಮಾಡಿಕೊಟ್ಟಿದ್ದಾರೆ. ಊರ ಹಾಗೂ ಪರವೂರ, ಜಾತಿ ಹಾಗೂ ಧರ್ಮ ಮರೆತು ಸಾವಿರಾರು ಶ್ರಮದಾನಿಗಳ ನಿರಂತರ ಸೇವೆಯ ಫಲದಿಂದಾಗಿ ಸೋಮನಾಥನ ಈ ಸುಂದರ ಸನ್ನಿಧಾನ ನಿರ್ಮಾಣಗೊಂಡಿರುವುದು ಒಂದು ಹೆಮ್ಮೆಯ ಸಂಗತಿ.

ಪ್ರಸ್ತುತ ಈ ದೇವಸ್ಥಾನವು ಸುಮಾರು ೨.೭೫ ಎಕರೆ ವಿಶಾಲವಾದ ಜಾಗವನ್ನು ಒಳಗೊಂಡಿದ್ದು ಶಾಸಕರ ನೇತೃತ್ವದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ ಕಾರ್ಯಗಳು ವೇಗವಾಗಿ ನಿರ್ಮಾಣಗೊಳ್ಳುತ್ತಿದೆ. ಒಟ್ಟಾರೆಯಾಗಿ ಒಂದು ಸುಂದರ ಹಾಗೂ ವಿಶೇಷ ದೇವಸ್ಥಾನ ಮೂಡಬಿದ್ರೆ ಪರಿಸರದಲ್ಲಿ ನಿರ್ಮಾಣಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿದ್ದು ಇದೇ ಫೇಬ್ರವರಿ 28 ಶುಕ್ರವಾರದಿಂದ ಆರಂಭಗೊಂಡು ಮಾರ್ಚ್ 7 ರ ತನಕ ವಿಜೃಂಭನೆಯಿಂದ ಜರುಗಲಿದ್ದು ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಸಕುಂಟುಂಬಿಕರಾಗಿ ಪಾಲ್ಗೊಂಡು ಶ್ರೀ ಸೋಮನಾಥೇಶ್ವರನ ಕೃಪೆಗೆ ಪಾತ್ರರಾಗಿ.

Post a Comment

0 Comments