ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ ವೈದ್ಯಕೀಯ ಶಿಕ್ಷಣ ಯೋಜನೆಗೆ ಐತಿಹಾಸಿಕ ಯಶಸ್ಸು ದೊರೆತಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) 2026–27ನೇ ಶೈಕ್ಷಣಿಕ ವರ್ಷದಿಂದ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಧಿಕೃತ ಅನುಮೋದನೆ ನೀಡಿದೆ.
ಮೂಡುಬಿದಿರೆಯ ಮಿಜಾರಿನಲ್ಲಿ ನಿರ್ಮಾಣಗೊಂಡಿರುವ ಆಳ್ವಾಸ್ ವೈದ್ಯಕೀಯ ಕಾಲೇಜು ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಸಂಶೋಧನೆಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶ ಹೊಂದಿದೆ. ಅತ್ಯಾಧುನಿಕ ಮೂಲಸೌಕರ್ಯ, ಸುಸಜ್ಜಿತ ಪ್ರಯೋಗಾಲಯಗಳು, ಆಧುನಿಕ ಆಸ್ಪತ್ರೆ ಸೌಲಭ್ಯಗಳು ಹಾಗೂ ಅನುಭವಿ ಬೋಧಕ ವೃಂದದ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡಲು ಸಂಸ್ಥೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಎನ್‌ಎಂಸಿ ಅನುಮೋದನೆಯೊಂದಿಗೆ 2026–27ನೇ ಶೈಕ್ಷಣಿಕ ವರ್ಷದಿಂದಲೇ 150 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ವ್ಯಾಸಂಗಕ್ಕೆ ಅವಕಾಶ ದೊರೆಯಲಿದ್ದು, ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ವೈದ್ಯಕೀಯ ಶಿಕ್ಷಣಾಕಾಂಕ್ಷಿಗಳಿಗೆ ಇದು ಹೊಸ ಭರವಸೆಯ ಬಾಗಿಲು ತೆರೆಯಲಿದೆ. ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸುವ ಜೊತೆಗೆ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿಯೂ ಈ ಸಂಸ್ಥೆ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇದೆ.
ಈ ಕುರಿತು ಪ್ರತಿಕ್ರಿಯಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ, ಕೇಂದ್ರ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
"ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಪಯಣದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಇದು ಹೊಸ ಮೈಲಿಗಲ್ಲು. ಸಮಾಜಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಹಾಗೂ ಭವಿಷ್ಯದ ಸಮರ್ಥ ವೈದ್ಯರನ್ನು ರೂಪಿಸುವ ನಮ್ಮ ಸಂಕಲ್ಪಕ್ಕೆ ಈ ಅನುಮೋದನೆ ಮತ್ತಷ್ಟು ಬಲ ತುಂಬಿದೆ," ಎಂದು ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.