ಬಂಟ್ವಾಳ: ಹೈನುಗಾರಿಗೆ ಅದೆಷ್ಟೋ ಜನರ ಬದುಕನ್ನು ಬಂಗಾರವಾಗಿಸಿದೆ. ಮನೆಯಲ್ಲಿ ಎರಡು ಹಸುಗಳನ್ನು ಸಾಕಿ ಅದರಿಂದ ಬರುವ ಆದಾಯದಿಂದ ನೆಮ್ಮದಿಯ ಜೀವನವನ್ನು ನಡೆಸುತ್ತಿರುವ ಅದೆಷ್ಟೋ ಕುಟುಂಬಗಳು ನಮ್ಮ ಸಮಾಜದಲ್ಲಿದೆ. ಅಂತಹ ನೂರಾರು ಕುಟುಂಬಗಳ ಮಧ್ಯೆ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಪ್ರಮೀಳಾ ರಾಮಕೃಷ್ಣ ಅವರ ಕುಟುಂಬವೂ ಒಂದು. ಅನಂತಾಡಿಯ ಬಂಟ್ರಿಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯರಾಗಿರುವ ಪ್ರಮೀಳಾ ರಾಮಕೃಷ್ಣ ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ನಡೆಸಿದ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ.
ಗೋವುಗಳಲ್ಲಿ ದೇವರನ್ನು ಕಾಣುತ್ತಾ ಮಾತು ಬಾರದ ಹಸುಗಳನ್ನು ಮಕ್ಕಳಂತೆ ಸಾಕಿ ಅವುಗಳಿಂದ ಜೀವನ ರೂಪಿಸಿಕೊಳ್ಳುವ ಜೊತೆಗೆ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡುತ್ತಿರುವ ಪ್ರಮೀಳಾ ರಾಮಕೃಷ್ಣ ಅವರು ತಾವು ಸಾಕಿದ ನಾಲ್ಕು ವರ್ಷದ ಎಚ್.ಎಫ್ ತಳಿಯ ಹಸುವಿನಿಂದ ದಿನವೊಂದಕ್ಕೆ 22.2 ಲೀಟರ್ ಹಾಲಿನ ಇಳುವರಿಯನ್ನು ಪಡೆಯುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಹೈನುಗಾರಿಕೆಯಿಂದ ಸಮಾಜ ವಿಮುಖವಾಗುತ್ತಿರುವ ಸಂಧರ್ಭದಲ್ಲಿ ಈ ರೀತಿಯ ಸಾಧನೆ ಆನೇಕ ಹೈನುಗಾರರ ಸಮುದಾಯಕ್ಕೆ ಹೊಸ ಹುರುಪು ನೀಡುವುದಲ್ಲದೆ, ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಮೀಳಾ ರಾಮಕೃಷ್ಣ ಅವರಿಗೆ ಅಭಿನಂದನಾ ಪತ್ರದ ಜೊತೆಗೆ ಒಂದು ಗ್ರಾಮ್ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ. ಇವರ ಸಾಧನೆಗೆ ಬಂಟ್ರಿಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಪ್ರಮುಖರು ಹಾಗೂ ಗ್ರಾಮಸ್ಥರು ಆಭಿನಂದಿಸಿದ್ದಾರೆ.