ಬೆಂಗಳೂರಿನಲ್ಲಿ ಆಯೋಜಿಸಲಾದ ಮೂಡುಬಿದಿರೆ ಮಹಾವೀರ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ನೀಡಿದ ಮೌಲ್ಯಾಧಾರಿತ ಶಿಕ್ಷಣವೇ ಇಂದು ಸಮಾಜದಲ್ಲಿ ಗುರುತಿಸಿಕೊಳ್ಳಲು ನೆರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ದಿನಗಳಲ್ಲಿ ಪಾಠದ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಾಧ್ಯಾಪಕರು ನಿರಂತರ ಪ್ರೋತ್ಸಾಹ ನೀಡುತ್ತಿದ್ದರು. ತಪ್ಪುಗಳನ್ನು ತಿದ್ದಿ, ಅಗತ್ಯವಿದ್ದಾಗ ಪೋಷಕರನ್ನೂ ಕರೆಸಿ ಮಾರ್ಗದರ್ಶನ ನೀಡುತ್ತಿದ್ದ ಕ್ರಮವೇ ನಮ್ಮ ಜೀವನದ ಶಿಸ್ತು ಹಾಗೂ ಜವಾಬ್ದಾರಿತನಕ್ಕೆ ಬುನಾದಿಯಾಯಿತು ಎಂದು ಯು.ಟಿ. ಖಾದರ್ ಹೇಳಿದರು.
ವಜ್ರಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ ಹಳೆಯ ವಿದ್ಯಾರ್ಥಿಗಳು ಸಕ್ರಿಯವಾಗಿ ಕೈಜೋಡಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಶೈಕ್ಷಣಿಕ ಕ್ರಾಂತಿಯ ಸಾಕ್ಷ್ಯ ಹಳೆಯ ವಿದ್ಯಾರ್ಥಿಗಳು:
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಈ ಭಾಗದಲ್ಲಿ ಮಹಾವೀರ ಕಾಲೇಜು ತಂದ ಶೈಕ್ಷಣಿಕ ಕ್ರಾಂತಿಗೆ ಹಳೆಯ ವಿದ್ಯಾರ್ಥಿಗಳ ಸಾಧನೆಗಳೇ ಜೀವಂತ ಸಾಕ್ಷಿಯಾಗಿದೆ ಎಂದರು. ಲಾಭಮುಖಿ ಶಿಕ್ಷಣ ವ್ಯವಸ್ಥೆ ವ್ಯಾಪಕವಾಗುತ್ತಿರುವ ಇಂದಿನ ದಿನಗಳಲ್ಲಿ, ಕೇವಲ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಉದ್ದೇಶದಿಂದ ಮಣಿಪಾಲ್ ಸಮೂಹ ಆರಂಭಿಸಿದ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ ಎಂದು ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪಟ್ಟಣಗಳಲ್ಲಿ ಕಾಲೇಜು ಶಿಕ್ಷಣ ಲಭ್ಯವಿರದ ಕಾಲದಲ್ಲಿ, ಮೂಡುಬಿದಿರೆಯಲ್ಲಿ ಮಹಾವೀರ ಕಾಲೇಜು ಸ್ಥಾಪನೆಯಾಗಿ ಸಾವಿರಾರು ಯುವಕರ ಭವಿಷ್ಯ ರೂಪುಗೊಂಡಿದೆ. ಇಂದು ವಿಧಾನಸಭಾಧ್ಯಕ್ಷರಾಗಿರುವ ಯು.ಟಿ. ಖಾದರ್ ಅವರಂತಹ ಅನೇಕ ಸಾಧಕರು ಈ ಸಂಸ್ಥೆಯಿಂದ ಹೊರಬಂದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ:
ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ಚಟುವಟಿಕೆಗಳು, ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶಿಕ್ಷಣ ಸಹಾಯ, ಮಧ್ಯಾಹ್ನದ ಊಟ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ. ಮಾತನಾಡಿ, ರಾಜ್ಯ, ಮುಂಬೈ, ಕೇರಳ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಪ್ರಮುಖ ನಗರಗಳಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅನಿತಾ ಸುರೇಂದ್ರ ಕುಮಾರ್, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಳೆಯ ವಿದ್ಯಾರ್ಥಿಗಳು ಕಾಲೇಜು ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿದರು.
