ನವರಾತ್ರಿಯ ಆರನೇ ದಿನವನ್ನು ಕಾತ್ಯಾಯನಿ ದೇವಿಯ ಆರಾಧನೆಗೆ ಮೀಸಲಾಗಿರಿಸಲಾಗಿದೆ. ದುರಾತ್ಮರ ನಿಗ್ರಹಕ್ಕಾಗಿ ಅವತಾರಗೊಂಡ ದೇವಿ ಕಾತ್ಯಾಯನಿ ಮಹಿಷಾಸುರನ ವಧೆಗೆ ಪ್ರಸಿದ್ಧಳಾದಳು. ಅವರ ರೂಪವನ್ನು “ಯುದ್ಧದೇವಿ” ಎಂದು ವರ್ಣಿಸಲಾಗುತ್ತದೆ. ನಾಲ್ಕು ಕರಗಳಿಂದ ಕೂಡಿದ ಈ ದೇವಿ, ಬಲಗೈಯಲ್ಲಿ ಖಡ್ಗ ಮತ್ತು ಕಮಲವನ್ನು, ಎಡಗೈಯಲ್ಲಿ ಕವಚ ಮತ್ತು ಜಪಮಾಲೆಯನ್ನು ಧರಿಸಿಕೊಂಡಿರುವಂತೆ ಚಿತ್ರಿಸಲ್ಪಟ್ಟಿದ್ದಾಳೆ.
ಕಾತ್ಯಾಯನಿ ದೇವಿಯನ್ನು ಶೌರ್ಯ, ಪರಾಕ್ರಮ ಮತ್ತು ನ್ಯಾಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ಈ ದೇವಿಯ ಆರಾಧನೆಯಿಂದ ಧೈರ್ಯ, ಶಕ್ತಿಯ ಜೊತೆಗೆ ಭಕ್ತರಿಗೆ ಧಾರ್ಮಿಕ ಸಾಧನೆಗೆ ಬೇಕಾದ ಆತ್ಮವಿಶ್ವಾಸವೂ, ಲಭಿಸುತ್ತದೆ ಎಂದು ನಂಬಿಕೆ ಇದೆ. ವಿಶೇಷವಾಗಿ, ವಿವಾಹ ಪ್ರಾಪ್ತಿಯ ವಯಸ್ಸಿನ ಯುವತಿಯರು ಈ ದಿನ ಕಾತ್ಯಾಯನಿ ದೇವಿಯನ್ನು ಭಕ್ತಿಭಾವದಿಂದ ಪೂಜಿಸಿದರೆ, ಅವರಿಗೆ ಉತ್ತಮ ವರಪ್ರಾಪ್ತಿ ಲಭಿಸುತ್ತದೆ ಎಂಬ ನಂಬಿಕೆ ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಈ ದಿನದ ಪೂಜೆಯಲ್ಲಿ ಕುಂಕುಮ, ಹಳದಿ ಹೂವು, ಚಂದನ, ಕೇಸರಿ ಬಣ್ಣದ ವಸ್ತ್ರ ಇತ್ಯಾದಿಗಳನ್ನು ದೇವಿಗೆ ಸಮರ್ಪಿಸುವುದು ಶ್ರೇಷ್ಠವೆಂದು ಹೇಳಲಾಗಿದೆ. ಹಳದಿ ಮತ್ತು ಕೇಸರಿ ಬಣ್ಣಗಳು ಶೌರ್ಯ ಹಾಗೂ ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿವೆ.
ಸಾಮಾನ್ಯ ಭಕ್ತನ ದೃಷ್ಟಿಯಿಂದ, ಆರನೇ ದಿನದ ಆರಾಧನೆ ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ, ದೃಢಸಂಕಲ್ಪ ಹಾಗೂ ಧೈರ್ಯವನ್ನು ನೀಡುತ್ತದೆ. ಶಕ್ತಿ ಆರಾಧನೆಯ ಈ ಹಬ್ಬದಲ್ಲಿ ಆರನೇ ದಿನದ ಮಹತ್ವವೇನೆಂದರೆ– ಜೀವನದಲ್ಲಿ ಶಕ್ತಿ, ಧೈರ್ಯ, ಹಾಗೂ ನಿರ್ಭಯತೆಯೊಂದಿಗೆ ಸಾಗುವ ಮನೋಬಲವನ್ನು ಪಡೆಯುವುದು.
0 Comments