ವಿರಾಜಪೇಟೆ: ಕರ್ನಾಟಕ ಆಂಟಿ ನಕ್ಸಲ್ ಫೋರ್ಸ್ (ANF) ಹಾಗೂ ಕೆ. ಅಮರನಾಥ ಶೆಟ್ಟಿ ಚಾರಿಟಬಲ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ವಿರಾಜಪೇಟೆಯಲ್ಲಿ ಬುಡಕಟ್ಟು ಜನಾಂಗದವರಿಗಾಗಿ ಬೃಹತ್ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಎರಡನೇ ಬಾರಿಗೆ ಆಯೋಜಿಸಲಾದ ಈ ವಿಶೇಷ ಶಿಬಿರವು ಕಾಡು ಕುರುಬ, ಜೇನು ಕುರುಬ, ಸೋಲಿಗ, ಯರವ ಹಾಗೂ ಕುಡಿಯ ಬುಡಕಟ್ಟು ಸಮುದಾಯದವರ ಆರೋಗ್ಯ ಸುಧಾರಣೆಯನ್ನು ಗುರಿಯಾಗಿಸಿಕೊಂಡಿತ್ತು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಬಿಂದುಮಣಿ ಶಿಬಿರವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಆರ್. ಹರಿರಾಮ್ ಶಂಕರ್ ಅವರ ಸಮರ್ಥ ಮೇಲ್ವಿಚಾರಣೆಯಲ್ಲಿ ನಡೆದ ಈ ಸೇವಾ ಕಾರ್ಯದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ವೈದ್ಯಕೀಯ ಆಸ್ಪತ್ರೆ, ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ ಹಾಗೂ ಮಡಿಕೇರಿಯ ಇಕ್ಷಾ ಸೂಪರ್‌ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗ ನೀಡಿದ್ದವು.
ಟ್ರಸ್ಟ್‌ನ ಅಧ್ಯಕ್ಷೆ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅವರ ಸಂಯೋಜನೆಯಲ್ಲಿ ನಡೆದ ಈ ಶಿಬಿರದಲ್ಲಿ 50ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಿ, ಸುಮಾರು 276 ಫಲಾನುಭವಿಗಳನ್ನು ತಪಾಸಣೆ ನಡೆಸಿದರು. ಶಿಬಿರದಲ್ಲಿ ಪತ್ತೆಯಾದ ಕಣ್ಣಿನ ಸಮಸ್ಯೆವುಳ್ಳವರಿಗೆ 69 ಉಚಿತ ಕನ್ನಡಕ ವಿತರಣೆ ಹಾಗೂ 6 ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ.